ಅಲ್ ಖಾಯಿದಾಕ್ಕೆ ತುರ್ತಾಗಿ ವೈದ್ಯರು, ವಿಜ್ಞಾನಿಗಳು ಬೇಕಂತೆ!
ಅಲ್ಜೀರಿಯಾ, ಶುಕ್ರವಾರ, 12 ಫೆಬ್ರವರಿ 2010( 16:10 IST )
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ವಿಜ್ಞಾನಿಗಳು ಹಾಗೂ ಐಟಿ ತಂತ್ರಜ್ಞರು ಅಲ್ಜೀರಿಯಾದ ಅಲ್ ಖಾಯಿದಾ ಶಾಖೆಯ ಸಂಘಟನೆಗೆ ನೇಮಕಾತಿ ಮಾಡಿಕೊಳ್ಳಲು ಈಗಾಗಲೇ ಪ್ರಚಾರಾಂದೋಲನ ಹಮ್ಮಿಕೊಂಡಿರುವುದಾಗಿ ವೆಬ್‌ಸೈಟ್ ವರದಿಯೊಂದು ತಿಳಿಸಿದೆ.
'ಪದವಿಪೂರ್ವ ವಿದ್ಯಾರ್ಥಿಗಳು, ಕೆಮಿಸ್ಟ್, ವೈದ್ಯರು ಮತ್ತು ಐಟಿ ತಂತ್ರಜ್ಞರು ನಮ್ಮ ಸಂಘಟನೆಗೆ ಸೇರಿ' ಎಂದು ಅಲ್ ಖಾಯಿದಾ ಟೆರರ್ ನೆಟ್‌ವರ್ಕ್ ಮನವಿ ಮಾಡಿಕೊಂಡಿರುವುದಾಗಿ ಜಿಹಾದಿ ವೆಬ್‌ಸೈಟ್‌ಗೆ ನೀಡಿರುವ ಹೇಳಿಕೆಯ ವರದಿಯಲ್ಲಿ ವಿವರಿಸಿದೆ.
ಪ್ಯಾಲೆಸ್ತೇನೆ, ಇರಾಕ್ ಮತ್ತು ಅಫ್ಘಾನಿಸ್ತಾನ್‌ಗಳಲ್ಲಿ ಪ್ರತಿನಿತ್ಯ ನಡೆಯುತ್ತಿರುವ ನರಮೇಧವನ್ನು ನೆನಪಿಸಿಕೊಳ್ಳಿ ಎಂದು ಅಬು ಮುಸ್ಲಿಮ್ ಅಲ್ ಜಾಜೈರಿ ಸಹಿಯುಳ್ಳ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಲ್ಲದೇ ಅಲ್ ಖಾಯಿದಾಕ್ಕೆ ಬಾಂಬ್ ತಯಾರಿಕೆ ಮಾಡುವವರು ಮತ್ತು ಸಂಘಟನೆಯ ಹೋರಾಟಗಾರರಿಗೆ ಚಿಕಿತ್ಸೆ ನೀಡಲು ವೈದ್ಯರ ಅಗತ್ಯವಿದೆ ಎಂಬುದಾಗಿಯೂ ಹೇಳಿದೆ. ಪ್ರಸ್ತುತವಾಗಿ ಅಲ್ಜೀರಿಯಾದಲ್ಲಿ ಅಲ್ ಖಾಯಿದಾ ಸುಮಾರು ಶೇ.80ರಷ್ಟು ಯುವಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಅವರೆಲ್ಲರೂ ಹೈಸ್ಕೂಲ್‌ಗಿಂತ ಹೆಚ್ಚಿನ ಶಿಕ್ಷಣ ಪಡೆದವರಲ್ಲ ಎಂದು ವಿವರಿಸಿದೆ.