ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೆ.25ರಂದು ನವದೆಹಲಿಯಲ್ಲಿ ಕಾರ್ಯದರ್ಶಿಗಳ ಮಾತುಕತೆ: ಪಾಕ್ (India | Pakistan | foreign secretaries talk | New Delhi)
Bookmark and Share Feedback Print
 
ಫೆಬ್ರವರಿ 25ರಂದು ನವದೆಹಲಿಯಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವಿನ ಉನ್ನತ ರಾಜತಾಂತ್ರಿಕರ ನಡುವಿನ ಮಾತುಕತೆ ನಡೆಯಲಿದೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿಯವರ ಕಚೇರಿ ಶುಕ್ರವಾರ ತಿಳಿಸಿದೆ.

ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳು ಮತ್ತು ವಿದೇಶಾಂಗ ಸಚಿವಾಲಯದ ಉನ್ನತ ಅಧಿಕಾರಿಗಳು ಫೆಬ್ರವರಿ 25ರಂದು ಭಾರತದ ರಾಜಧಾನಿಯಲ್ಲಿ ಮುಖಾಮುಖಿಯಾಗಲಿದ್ದಾರೆ.

ಪಾಕಿಸ್ತಾನವು ಎಲ್ಲಾ ಪ್ರಮುಖ ವಿಚಾರಗಳನ್ನು ಈ ಸಂದರ್ಭದಲ್ಲಿ ಭಾರತದೊಂದಿಗೆ ಚರ್ಚಿಸಲಿದ್ದು, ಸಮಸ್ಯೆಗಳ ಪರಿಹಾರಕ್ಕಾಗಿ ಪೂರ್ಣ ಪ್ರಮಾಣದ ಮಾತುಕತೆಯನ್ನು ತ್ವರಿತವಾಗಿ ಆರಂಭಿಸಬೇಕಿರುವ ಅಗತ್ಯವನ್ನು ಭಾರತಕ್ಕೆ ಮನಗಾಣಿಸಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ಭಾರತದ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ನಡೆಸುವ ಮಾತುಕತೆ ಫಲಿತಾಂಶ ಬರುವಂತಿರಬೇಕು ಮತ್ತು ಅರ್ಥಪೂರ್ಣವಾಗಿರಬೇಕು ಎಂದು ಪಾಕ್ ವಿದೇಶಾಂಗ ಕಾರ್ಯದರ್ಶಿಯವರಿಗೆ ಪ್ರಧಾನ ಮಂತ್ರಿಗಳು ನಿರ್ದೇಶನ ನೀಡಿದ್ದಾರೆ ಎಂದೂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಶಾಂತಿ ಮಾತುಕತೆಗೆ 2008ರ ಮುಂಬೈ ದಾಳಿ ತಡೆಯೊಡ್ಡಿತ್ತು. ಆ ಬಳಿಕ ಉಭಯ ದೇಶಗಳ ನಡುವಿನ ಮಾತುಕತೆಯನ್ನು ಸ್ಥಗಿತಗೊಳಿಸಿದ್ದಲ್ಲದೆ, ಪಾಕಿಸ್ತಾನ ಮೂಲದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳದ ಹೊರತು ಆ ದೇಶದ ಜತೆ ಮಾತುಕತೆ ನಡೆಸುವುದಿಲ್ಲ ಎಂದು ಭಾರತವು ಹೇಳುತ್ತಾ ಬಂದಿತ್ತು.

ಅಫಘಾನಿಸ್ತಾನದ ಅಭಿವೃದ್ಧಿಯಲ್ಲಿ ಪಕ್ಕದ ಎರಡು ದೇಶಗಳು ಪಾಲ್ಗೊಳ್ಳಲು ತೀವ್ರ ಪೈಪೋಟಿ ನಡೆಸುತ್ತಿರುವುದು ಮತ್ತು ಈ ಪ್ರಾಂತ್ಯದಲ್ಲಿ ಶಾಂತಿ ನೆಲೆಸಬೇಕಾದ ಹಿನ್ನೆಲೆಯಲ್ಲಿ ಉಭಯ ದೇಶಗಳು ಮಾತುಕತೆಗೆ ಮುಂದಾಗಬೇಕು ಎಂದು ಅಮೆರಿಕಾ ಕಳೆದ ಹಲವು ಸಮಯಗಳಿಂದ ಒತ್ತಡ ಹೇರುತ್ತಾ ಬಂದಿತ್ತು.

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಒತ್ತು ಕೊಡುವ ಹಾಗೂ ಶಾಂತಿ ಮತ್ತು ಭದ್ರತೆಯ ಕುರಿತಾದ ಎಲ್ಲಾ ಮಾತುಕತೆಗಳಿಗೂ ಸಿದ್ಧ ಎಂದು ಭಾರತ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ, ಇದರಲ್ಲಿ ಕಾಶ್ಮೀರ ವಿವಾದವನ್ನೂ ಸೇರಿಸಬೇಕೆಂದು ಒತ್ತಾಯಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ