ಮೆಲ್ಬೊರ್ನ್, ಶುಕ್ರವಾರ, 12 ಫೆಬ್ರವರಿ 2010( 19:34 IST )
ಹಣದ ವಿಚಾರಕ್ಕಾಗಿ ನಡೆದ ಜಗಳದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಆಸ್ಟ್ರೇಲಿಯಾದ ಪರ್ಥ್ನಲ್ಲಿ ನಡೆದಿದ್ದು, ಮೃತರಾದವರು ಭಾರತೀಯರು ಎಂದು ಶಂಕಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿಯನ್ನು ವಿಚಾರಿಸಿದ ನಂತರ ವಿಷಯ ತಿಳಿದು ಬಂದಿರುವುದಾಗಿ ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಹಣದ ವಿಚಾರದ ನಡೆದ ವಾಗ್ವಾದವೇ ಇಬ್ಬರ ಸಾವಿಗೆ ಕಾರಣವಾಗಿದೆ ಎಂದು ಡಿಟೆಕ್ಟೀವ್ ಇನ್ಸ್ಪೆಕ್ಟರ್ ಡೇವಿಡ್ ಬ್ರೈಸನ್ ಹೇಳಿದ್ದಾರೆ. ಶುಕ್ರವಾರ ಸಂಜೆ ಹಣದ ವಿಚಾರಕ್ಕಾಗಿ ಇಬ್ಬರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಒಬ್ಬರಿಗೊಬ್ಬರು ಇರಿದುಕೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿಸಿದ್ದ. ಇಬ್ಬರು ಗಾಯಗೊಂಡು ಬಿದ್ದಿರುವ ಬಗ್ಗೆ ಮೂರನೇ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಎಎಪಿ ನ್ಯೂಸ್ ವಿವರಿಸಿದೆ.
ಇಬ್ಬರೂ ಸ್ನೇಹಿತರಾಗಿ ಜೊತೆಯಲ್ಲಿಯೇ ವಾಸಿಸುತ್ತಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಿಬ್ಬರನ್ನೂ ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಮೂರನೇ ವ್ಯಕ್ತಿಯನ್ನು ಕೂಡ ಭಾರತೀಯ ಎಂದು ಶಂಕಿಸಲಾಗಿದ್ದು, ಅವರಿಬ್ಬರ ಸಾವಿನ ಬಗ್ಗೆ ವಿಚಾರಣೆ ನಡೆಸಲಾಗಿದ ಎಂದು ಹೇಳಿದರು.