ಇಸ್ಲಾಮಾಬಾದ್, ಶುಕ್ರವಾರ, 12 ಫೆಬ್ರವರಿ 2010( 20:24 IST )
ಇಲ್ಲಿನ ಹೊರವಲಯದ ಬಾನ್ನು ಪ್ರದೇಶದ ಪೊಲೀಸ್ ತರಬೇತಿ ಕೇಂದ್ರದ ಸಮೀಪ ಅವಳಿ ಬಾಂಬ್ ಸ್ಫೋಟಿಸಿದ ಪರಿಣಾಮ 8ಮಂದಿ ಪೊಲೀಸರು ಸೇರಿದಂತೆ 15ಜನರು ಸಾವನ್ನಪ್ಪಿದ್ದು, 24ಮಂದಿ ಗಾಯಗೊಂಡಿದ್ದಾರೆ.
ಕಳೆದ ಒಂದು ದಿನದಲ್ಲಿ ರಕ್ಷಣಾ ಪಡೆಯ ಸಿಬ್ಬಂದಿಗಳ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ. ಈ ಘಟನೆಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿ(ಡಿಪಿಒ) ಇಕ್ಬಾಲ್ ಮಾನ್ವತ್ ಕೂಡ ಗಾಯಗೊಂಡಿದ್ದಾರೆ.
ಆತ್ಮಹತ್ಯಾ ಬಾಂಬರ್ನೊಬ್ಬ ತನ್ನನ್ನು ತಾನೇ ಸ್ಫೋಟಿಸಿಗೊಂಡು ಒಂದು ಘಟನೆ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ. ಅವಳಿ ಸ್ಫೋಟ ಯಾವ ರೀತಿ ಸಂಭವಿಸಿದ ಎಂಬ ವಿವರವನ್ನು ಅಧಿಕಾರಿಗಳು ನೀಡಿಲ್ಲ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ, ಇದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಇಕ್ಬಾಲ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಪೇಶಾವರದ ಆಸ್ಪತ್ರೆಗೆ ದಾಖಲಿಸಲು ಹೆಲಿಕಾಪ್ಟರ್ ನೆರವಿಗಾಗಿ ಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.