ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಂದಿರಾ ಗಾಂಧಿ ಹಂತಕರು ಹುತಾತ್ಮರೆಂದು ಗೌರವಿಸಿದರು! (Indira Gandhi | New Zealand | Sikh temple | Indian Prime Minister)
Bookmark and Share Feedback Print
 
ಭಾರತದ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರನ್ನು ಹತ್ಯೆಗೈದ ಮೂವರು ವ್ಯಕ್ತಿಗಳನ್ನು ಹುತಾತ್ಮರು ಎಂದು ಬಣ್ಣಿಸಿರುವ ನ್ಯೂಜಿಲೆಂಡ್‌ನ ಸಿಖ್ ಗುರುದ್ವಾರವೊಂದು ಅವರ ವರ್ಣಚಿತ್ರಗಳನ್ನು ತೂಗು ಹಾಕುವ ಮೂಲಕ ಗೌರವ ಸಲ್ಲಿಸಿ ವಿವಾದಕ್ಕೆ ಕಾರಣವಾಗಿದೆ.

ಆಕ್ಲೆಂಡ್‌ನಲ್ಲಿನ ಮನುಕಾವ್ ಎಂಬಲ್ಲಿನ ಸಿಖ್ ಗುರುದ್ವಾರವೊಂದರಲ್ಲಿ ಗಾಂಧಿಯವರ ಅಂಗರಕ್ಷಕರಾದ ಸತ್ವಾಂತ್ ಸಿಂಗ್ ಮತ್ತು ಬೀಂತ್ ಸಿಂಗ್ ಹಾಗೂ ಪಿತೂರಿದಾರ ಕೇಹಾರ್ ಸಿಂಗ್ ಅವರ ವರ್ಣಚಿತ್ರಗಳನ್ನು ತೂಗು ಹಾಕಲಾಗಿದೆ ಎಂದು 'ವೀಕೆಂಡ್ ಹೆರಾಲ್ಡ್' ಪತ್ರಿಕೆ ಶನಿವಾರ ವರದಿ ಮಾಡಿದೆ.
ತೂಗು ಹಾಕಲಾಗಿರುವ ಸತ್ವಾಂತ್ ಸಿಂಗ್  ಚಿತ್ರ
PR


ಇಂದಿರಾ ಅಂಗರಕ್ಷಕರಾದ ಸತ್ವಾಂತ್ ಸಿಂಗ್ ಮತ್ತು ಬೀಂತ್ ಸಿಂಗ್‌ 30ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿ ಪ್ರಧಾನಿಯವರನ್ನು ಕೊಂದ ನಂತರ ಅವರನ್ನು ಭದ್ರತಾ ಪಡೆಗಳು ಕೊಂದು ಹಾಕಿದ್ದವು. ಪಿತೂರಿದಾರ ಕೇಹಾರ್ ಸಿಂಗ್‌ಗೆ ನಂತರ ಮರಣದಂಡನೆ ವಿಧಿಸಲಾಗಿತ್ತು.

'ಶಾಹೀದ್ ಭಾಯ್' (ಹುತಾತ್ಮ ಸಹೋದರ) ಎಂದು ನೀಡಲಾಗಿರುವ ಶೀರ್ಷಿಕೆಯಡಿಯಲ್ಲಿ ಸಿಖ್ ನಂಬಿಕೆಗಳಿಗೆ ಜೀವದಾನ ಮಾಡಿರುವ ಇತರರ ವರ್ಣಚಿತ್ರಗಳ ಜತೆಗೆ ಈ ಮೂವರ ಚಿತ್ರಗಳನ್ನೂ ತೂಗು ಹಾಕಲಾಗಿದೆ.

ಇದರಿಂದ ನ್ಯೂಜಿಲೆಂಡ್‌ನಲ್ಲಿನ ಅತಿ ಹೆಚ್ಚು ಏಷಿಯನ್ನರನ್ನು ಹೊಂದಿರುವ ನಗರ ಆಕ್ಲೆಂಡ್‌ನ ಸಿಖ್ ಸಮುದಾಯ ಹೇಗೆ ಬೇರ್ಪಟ್ಟಿದೆ ಮತ್ತು ಇತರ ಭಾರತೀಯರು ಹೇಗೆ ಅಸಮಾಧಾನಗೊಂಡಿದ್ದಾರೆ ಎಂಬುದನ್ನು ಇದು ತೋರಿಸುತ್ತಿದೆ ಎಂದು ಪತ್ರಿಕೆ ವಿಶ್ಲೇಷಣೆ ನಡೆಸಿದೆ.

ಯಾರಾದರೂ ಭಯೋತ್ಪಾದಕರನ್ನು ಗೌರವಿಸಲು ಬಯಸಿದರೆ, ಅದು ಅವರ ವೈಯಕ್ತಿಕ ಆಯ್ಕೆ ಎಂದು ನ್ಯೂಜಿಲೆಂಡ್ ಭಾರತೀಯರ ಕೇಂದ್ರೀಯ ಸಂಘಟನೆ ಮಹಾ ಕಾರ್ಯದರ್ಶಿ ವೀರ್ ಖಾರ್ ಪ್ರತಿಕ್ರಿಯಿಸಿದ್ದಾರೆ.

ಆದರೆ ಅಂತಹ ವರ್ತನೆಗಳನ್ನು ಸಾರ್ವಜನಿಕವಾಗಿ ತೋರಿಸುವ ವಿರುದ್ಧ ಒಂದು ಸಮುದಾಯವಾಗಿ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಇಂದಿರಾ ಗಾಂಧಿಯವರ ಹತ್ಯೆಗೂ ಮೊದಲು ಸಿಖ್ ಸಮುದಾಯದ ವಿರುದ್ಧ ಅಮಾನವೀಯ ಕೃತ್ಯಗಳನ್ನು ನಡೆಸಲಾಗಿತ್ತು ಎಂಬುದನ್ನು ಒಪ್ಪಿಕೊಂಡರೂ, ಪ್ರಧಾನಿಯನ್ನು ಕೊಂದವರನ್ನು ಗೌರವಿಸುವುದು ಅನಗತ್ಯ ವಿವಾದವನ್ನು ಸೃಷ್ಟಿಸುತ್ತದೆ ಎಂದರು.

ಅದೇ ಹೊತ್ತಿಗೆ ಈ ಗುರುದ್ವಾರದೊಂದಿಗೆ 15 ವರ್ಷಗಳ ಸಂಬಂಧ ಹೊಂದಿರುವ ರಣವೀರ್ ಲಾಲಿ ಸಿಂಗ್ ಅವರು ಗಾಂಧಿಯನ್ನು ಹತೈಗೈದವರನ್ನು ಹುತಾತ್ಮರು ಎಂದು ಪರಿಗಣಿಸುತ್ತೇವೆ ಎಂದಿದ್ದಾರೆ.

ಇಂದಿರಾ ಗಾಂಧಿಯವರನ್ನು ಕೊಂದವರನ್ನು ನಾವು ಭಯೋತ್ಪಾದಕರು ಎಂದು ಪರಿಗಣಿಸುವುದಿಲ್ಲ. ಅವರು ನಮ್ಮ ಪಾಲಿಗೆ ಹುತಾತ್ಮರು. ನಮ್ಮ ಪವಿತ್ರ ಕ್ಷೇತ್ರ ಸ್ವರ್ಣಮಂದಿರದ ಮೇಲೆ ನಡೆಸಿದ ದಾಳಿಯ ವಿರುದ್ಧ ಆಕೆಯ ಅಂಗರಕ್ಷಕರು ಸೇಡು ತೀರಿಸಿಕೊಂಡಿದ್ದರು. ಅವರನ್ನು ನಾವು ಹುತಾತ್ಮರೆಂದೇ ಪರಿಗಣಿಸುತ್ತೇವೆ. ಇಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ