ಬೆಲ್ಜಿಯಂ ರೈಲುಗಳ ಮುಖಾಮುಖಿ ಡಿಕ್ಕಿಗೆ 20ಕ್ಕೂ ಹೆಚ್ಚು ಬಲಿ
ಬ್ರೂಸೆಲ್ಸ್, ಸೋಮವಾರ, 15 ಫೆಬ್ರವರಿ 2010( 17:43 IST )
ಬೆಲ್ಜಿಯಂನ ಬ್ರೂಸೆಲ್ಸ್ ನಗರದಲ್ಲಿ ನಿತ್ಯ ಪ್ರಯಾಣಿಕರ ರೈಲುಗಳೆರಡು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯೂಜಿಂಜೆನ್ ರೈಲು ನಿಲ್ದಾಣದ ಪಕ್ಕದಲ್ಲೇ ಬೆಳಿಗ್ಗೆ 8.30ಕ್ಕೆ ಈ ಘಟನೆ ಸಂಭವಿಸಿದ್ದು, ಈ ಸಂದರ್ಭದಲ್ಲಿ ವಾತಾವರಣದಲ್ಲಿ ಮಂಜು ಆವರಿಸಿತ್ತು ಎಂದು ವರದಿಗಳು ಹೇಳಿವೆ.
ಇತ್ತೀಚಿನ ಮಾಹಿತಿಗಳ ಪ್ರಕಾರ 20 ಮಂದಿ ಸಾವನ್ನಪ್ಪಿರುವ ಮಾಹಿತಿಗಳು ಬಂದಿವೆ. ಪೊಲೀಸರು ಮತ್ತು ಅಗ್ನಿಶಾಮಕ ದಳಗಳು ನೀಡಿರುವ ಮಾಹಿತಿಯಿದು ಎಂದು ನಗರದ ಮೇಯರ್ ಡಿರ್ಕ್ ಪೀಟರ್ಸ್ ವಿಆರ್‌ಟಿ ರೇಡಿಯೋ ನೆಟ್‌ವರ್ಕ್‌ಗೆ ತಿಳಿಸಿದ್ದಾರೆ.
ರೈಲುಗಳ ಡಿಕ್ಕಿ ಭೀಕರವಾಗಿತ್ತು. ರೈಲಿಗೆ ಈ ಸಂದರ್ಭದಲ್ಲಿ ಬ್ರೇಕ್ ಹಾಕಲು ಕೂಡ ಸಾಧ್ಯವಾಗಿರಲಿಲ್ಲ. ಬೋಗಿಗಳು ಪೂರ್ತಿಯಾಗಿ ತಿರುಚಲ್ಪಟ್ಟಿವೆ. ಹಲವು ಮಂದಿ ಗಾಯಗೊಂಡಿದ್ದು, ಆಘಾತಕ್ಕೊಳಗಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಕೆಲವರನ್ನು ಪಕ್ಕದ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಕೆಲವರನ್ನು ಪಕ್ಕದ ಕ್ರೀಡಾ ಸಂಕೀರ್ಣವೊಂದರಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಘಟನೆಗೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲವಾದರೂ, ದಟ್ಟ ಮಂಜು ಆವರಿಸಿದ್ದೇ ಕಾರಣ ಎಂದು ಹೇಳಲಾಗುತ್ತಿದೆ.
ಅಪಘಾತ ಜನಸಂದಣಿ ಇರುವ ಹೊತ್ತಿಗೆ ನಡೆದಿರುವುದರಿಂದ ಸಾವು ಮತ್ತು ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ. ಅತಿ ವೇಗದಿಂದ ಸಾಗುತ್ತಿದ್ದ ಎರಡೂ ರೈಲುಗಳು ಬಹುತೇಕ ಜಖಂಗೊಂಡಿವೆ. ಇದರಿಂದಾಗಿ ಈ ಮಾರ್ಗದಲ್ಲಿ ಚಲಿಸುವ ಇತರ ರೈಲುಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಈ ರೈಲಿನಲ್ಲಿ ಪ್ರಯಾಣಿಸಬೇಕಿದ್ದ ಮುಂದಿನ ನಿಲ್ದಾಣಗಳ ಪ್ರಯಾಣಿಕರು ಮತ್ತು ಇತರ ರೈಲುಗಳಲ್ಲಿ ಪ್ರಯಾಣಿಸಬೇಕಿದ್ದವರು ತಮ್ಮ ಪ್ರಯಾಣದ ಯೋಜನೆಗಳನ್ನು ಮುಂದಿನ ವ್ಯವಸ್ಥೆಯಾಗುವವರೆಗೆ ಬದಲಾಯಿಸಿಕೊಳ್ಲುವಂತೆ ಮನವಿ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ರೈಲ್ವೇ ಮಾರ್ಗವನ್ನು ತೆರವುಗೊಳಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.