ಇರಾನ್ ಮಿಲಿಟರಿ ಸರ್ವಾಡಳಿತಕ್ಕೊಳಗಾಗುತ್ತಿದೆ: ಅಮೆರಿಕಾ ಆತಂಕ
ದೋಹಾ, ಸೋಮವಾರ, 15 ಫೆಬ್ರವರಿ 2010( 19:16 IST )
ಸರಕಾರಿ ವಿರೋಧಿಗಳನ್ನು ಮಟ್ಟ ಹಾಕುತ್ತಿರುವ ಇರಾನ್ ಪರಮಾಣು ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ಕಳವಳ ವ್ಯಕ್ತಪಡಿಸುತ್ತಾ ಬಂದಿರುವ ಅಮೆರಿಕಾ ಸೋಮವಾರ ಮತ್ತೊಂದು ಹಂತದ ವಾಗ್ದಾಳಿ ನಡೆಸಿದ್ದು, ಇರಾನ್ ಮಿಲಿಟರಿ ದಬ್ಬಾಳಿಕೆಯ ರಾಷ್ಟ್ರವಾಗುತ್ತಿದೆ ಎಂದು ರಕ್ಷಣಾ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಆರೋಪಿಸಿದ್ದಾರೆ.
ದೋಹಾದಲ್ಲಿನ ಅರಬ್ ವಿದ್ಯಾರ್ಥಿಗಳ 'ಕಾರ್ನೆಗಿ ಮೆಲನ್'ನಲ್ಲಿ ಮಾತನಾಡುತ್ತಿದ್ದ ಹಿಲರಿ, ಇರಾನ್‌ನ ಕ್ರಾಂತಿಕಾರಿ ಪಡೆಗಳು ಸಾಕಷ್ಟು ಶಕ್ತಿಯನ್ನು ಮೈಗೂಡಿಸಿಕೊಂಡಿದ್ದು, ಸರಕಾರವನ್ನು ಅತಿಕ್ರಮಿಸುತ್ತಿದೆ ಮತ್ತು ಇರಾನ್ ಮಿಲಿಟರಿ ಸರ್ವಾಡಳಿತದತ್ತ ಹೋಗುತ್ತಿದೆ. ಇದು ನಮ್ಮ ದೃಷ್ಟಿಕೋನ ಎಂದರು.
ಅಮೆರಿಕಾ ವ್ಯಾಪ್ತಿಯಲ್ಲಿರುವ ಇರಾನ್‌ನ ಕ್ರಾಂತಿಕಾರಿ ಪಡೆಯ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕುವುದಾಗಿ ಕಳೆದ ವಾರವಷ್ಟೇ ಅಮೆರಿಕಾದ ಖಜಾನೆ ಇಲಾಖೆಯು ಪ್ರಕಟಿಸಿತ್ತು.
ಇರಾನ್‌ನ ಸಾಮಾನ್ಯ ಸೇನಾಪಡೆಯಿಂದ ಬೇರ್ಪಟ್ಟ ನಂತರ ಕ್ರಾಂತಿಕಾರಿ ಪಡೆಯು ಇರಾನ್ ಆಳ್ವಿಕೆಯಲ್ಲಿ ಸುದೀರ್ಘ ಪಾತ್ರವಹಿಸುತ್ತಿದ್ದು, ಕ್ಷಿಪಣಿ ಅಭಿವೃದ್ಧಿ, ತೈಲ ಮೂಲಗಳು, ಅಣೆಕಟ್ಟು ನಿರ್ಮಾಣ, ರಸ್ತೆ ನಿರ್ಮಾಣ, ದೂರವಾಣಿ ಸಂಪರ್ಕ ಕ್ಷೇತ್ರ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೈಯಾಡಿಸುತ್ತಿದೆ.
ಇರಾನ್ ಮೂಲದವರು ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಹಿಲರಿಯವರನ್ನು ಪ್ರಶ್ನಿಸುತ್ತಾ, ಒಂದು ವೇಳೆ ಇರಾಕ್‌ನಲ್ಲಿ ತೈಲ ಸಂಪನ್ಮೂಲಗಳು ಇಲ್ಲದೇ ಇರುತ್ತಿದ್ದರೆ ಅಮೆರಿಕಾವು ಅಲ್ಲಿಗೆ ಪ್ರವೇಶಿಸುತ್ತಿತ್ತೇ ಎಂದಾಗ ಉತ್ತರಿಸಿದ ಅವರು, ಇರಾಕ್ ಸರಕಾರದ ಜತೆ ಅಮೆರಿಕಾ ಸಾಮಾನ್ಯ ಸಂಬಂಧವನ್ನಷ್ಟೇ ಬಯಸುತ್ತಿದೆ ಹೊರತು ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನಲ್ಲ ಎಂದರು.
ನಾವು ಹೇಳಿದಂತೆ ಇರಾಕ್‌ನಿಂದ ಹೋಗುವಾಗ ನಮ್ಮ ಮಿಲಿಟರಿಯೊಂದಿಗೆ ಹೋಗುತ್ತೇವೆ. ಆ ಪ್ರಕ್ರಿಯೆ ನಿಗದಿಯಂತೆ ನಡೆಯಲಿದೆ. ಇತರ ದೇಶಗಳ ಜತೆ ನಾವು ಹೊಂದಿರುವ ಸಂಬಂಧದಂತೆ ಇರಾಕ್ ಜತೆಗೂ ಸಂಬಂಧ ಮುಂದುವರಿಯಲಿದೆ ಎಂದರು.