ವಾಷಿಂಗ್ಟನ್, ಮಂಗಳವಾರ, 16 ಫೆಬ್ರವರಿ 2010( 12:30 IST )
ಪಾಕಿಸ್ತಾನದ ನಗರವಾದ ಕರಾಚಿಯಲ್ಲಿ ತಾಲಿಬಾನ್‌ನ ಎರಡನೇ ಕಮಾಂಡರ್ ಆಗಿರುವ ಮುಲ್ಲಾ ಮೊಹಮ್ಮದ್ ಓಮರ್ ನಿಕಟವರ್ತಿ ಸೆರೆ ಸಿಕ್ಕಿರುವುದಾಗಿ ಅಮೆರಿಕದ ಅಧಿಕಾರಿಗಳು ತಿಳಿಸಿದ್ದು, ಉಗ್ರರ ವಿರುದ್ಧದ ಹೋರಾಟದಲ್ಲಿ ಇದೊಂದು ದೊಡ್ಡ ಯಶಸ್ವಿ ಕಾರ್ಯಾಚರಣೆಯಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಐಎಸ್ಐ ಮತ್ತು ಅಮೆರಿಕದ ಸಿಐಎ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಮುಲ್ಲಾ ಅಬ್ದುಲ್ ಗನಿ ಬಾರಾದಾರ್ ಸೆರೆ ಸಿಕ್ಕಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಈತ 9/11ರ ದಾಳಿಗಿಂತ ಮೊದಲು ಅಲ್ ಖಾಯಿದಾದ ವರಿಷ್ಠ ಒಸಾಮ ಬಿನ್ ಲಾಡೆನ್ ಜೊತೆಗೂ ನಿಕಟವರ್ತಿಯಾಗಿರುವುದಾಗಿ ಹೇಳಿದ್ದಾನೆ.
ಓಮರ್ ನಂತರ ಪಾಕ್ ತಾಲಿಬಾನ್ ಪಡೆಗೆ ಗನಿ ಎರಡನೇ ಕಮಾಂಡರ್ ಆಗಿರುವುದಾಗಿ ವಿವರಿಸಿದ್ದಾನೆ. ಆ ನಿಟ್ಟಿನಲ್ಲಿ ಅಫ್ಘಾನ್ ಮತ್ತು ಪಾಕಿಸ್ತಾನದಲ್ಲಿನ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಒಬಾಮ ಆಡಳಿತ ದೊಡ್ಡ ಯಶಸ್ಸು ಸಾಧಿಸಿದಂತಾಗಿದೆ.
ಮುಲ್ಲಾ ಬಾರಾದಾರ್ ಇದೀಗ ಪಾಕಿಸ್ತಾನದ ಅಧಿಕಾರಿಗಳ ವಶದಲ್ಲಿದ್ದು, ಅಮೆರಿಕ ಮತ್ತು ಪಾಕಿಸ್ತಾನದ ಗುಪ್ತಚರ ಇಲಾಖೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದೆ.