ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಐಲಾ' ಪರಿಣಾಮ; ಬಾಂಗ್ಲಾದಲ್ಲಿನ್ನೂ ಎರಡು ಲಕ್ಷ ನಿರಾಶ್ರಿತರು (Bangladesh | cyclone victims | Cyclone Aila | Khulna)
Bookmark and Share Feedback Print
 
ಪ್ರಬಲ ಚಂಡಮಾರುತ 'ಐಲಾ' ಬಾಂಗ್ಲಾದೇಶದ ಒಂದು ಭಾಗಕ್ಕೆ ಬಡಿದು ಹೋದ ಒಂಬತ್ತು ತಿಂಗಳ ನಂತರವೂ ಅಲ್ಲಿನ ಪರಿಸ್ಥಿತಿ ತೀರಾ ಕೆಟ್ಟದಾಗಿಯೇ ಮುಂದುವರಿದಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶೀಯರು ನದಿ ದಂಡೆಗಳ ಮೇಲೆ ಮುಂದಿನ ದಿನಗಳ ಬಗ್ಗೆ ಯಾವುದೇ ಭರವಸೆಯಿಲ್ಲದೆ ನಿರಾಶ್ರಿತರಾಗಿ ಮುಂದುವರಿದಿದ್ದಾರೆ ಎಂದು ಮಂಗಳವಾರ ಅವರಿಗೆ ಸಹಕಾರ ನೀಡುತ್ತಿರುವ ಸಂಘಟನೆಯೊಂದು ತಿಳಿಸಿದೆ.

ಕಳೆದ ವರ್ಷದ ಮೇ ತಿಂಗಳಲ್ಲಿ ಬಾಂಗ್ಲಾದೇಶದ ದಕ್ಷಿಣ ಭಾಗವನ್ನು ಸವರಿಕೊಂಡು ಹೋಗಿದ್ದ 'ಐಲಾ' 300 ಜನರನ್ನು ಬಲಿ ಪಡೆದಿತ್ತು. ಅಲ್ಲದೆ ಸುಮಾರು 4,000 ಕಿಲೋ ಮೀಟರ್‌ಗಳಷ್ಟು ರಸ್ತೆ ಮತ್ತು ದಂಡೆಗಳು ಈ ಸಂದರ್ಭದಲ್ಲಿ ಪುನರ್ಬಳಕೆಯಾಗದ ರೀತಿಯಲ್ಲಿ ನಾಶವಾಗಿತ್ತು ಎಂದು ಸಂಘಟನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಖುಲ್ನಾ ಮತ್ತು ಸಕ್ಹೀರಾ ಜಿಲ್ಲೆಗಳ ಒಂದು ಲಕ್ಷಕ್ಕೂ ಹೆಚ್ಚು ಜನತೆ ಈಗಲೂ ಕರುಣಾಜನಕ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹೆಚ್ಚುವರಿ ಒಂದು ಲಕ್ಷ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ ಎಂದು 'ಒಕ್ಫಾಮ್ ಎಂಡ್ ಕೇರ್' ಸೇರಿದಂತೆ 18 ಸಮಾಜಸೇವಾ ಸಂಘಟನೆಗಳನ್ನು ಹೊಂದಿರುವ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ನದಿಗಳು ಮತ್ತು ಸಣ್ಣ ಕಾಲುವೆಗಳಿಂದ ತುಂಬಿ ಹೋಗಿರುವ ದಕ್ಷಿಣ ಬಾಂಗ್ಲಾದೇಶದಲ್ಲಿನ ಪ್ರದೇಶಗಳಲ್ಲಿ ಭಾರೀ ಅಲೆಗಳ ಅಬ್ಬರದಿಂದ ಪ್ರತೀ ದಿನ ಕನಿಷ್ಠ ಎರಡು ಬಾರಿ ಪ್ರವಾಹ ಪರಿಸ್ಥಿತಿಯುಂಟಾಗುತ್ತಿದೆ.

ತಗ್ಗು ಪ್ರದೇಶಗಳ ಮೇಲೆ ಹರಿದು ಬರುವ ಉಪ್ಪು ನೀರನ್ನು ತಡೆಯಲು 1960ರಿಂದ ಇಲ್ಲಿನ ಸರಕಾರವು ಇಂತಹ ನದಿ ಮತ್ತು ಕಾಲುವೆಗಳಿಗೆ ಸಾಲು ದಂಡೆಗಳನ್ನು ನಿರ್ಮಿಸುತ್ತಾ ಬಂದಿದೆ. ಆ ಮೂಲಕ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹಕಾರ ನೀಡುತ್ತಿತ್ತು.

ಆದರೆ ಐಲಾ ಚಂಡಮಾರುತ ಈ ಪ್ರದೇಶಕ್ಕೆ ಬಡಿದ ಬಳಿಕ ಇವ್ಯಾವುವೂ ಉಳಿದಿಲ್ಲ. ಹಾಗಾಗಿ ಉಪ್ಪು ನೀರು ಸತತವಾಗಿ ಎಗ್ಗಿಲ್ಲದೆ ತಗ್ಗು ಪ್ರದೇಶಗಳತ್ತ ನುಗ್ಗಿ ಬರುತ್ತಿದೆ. ಈ ಪ್ರದೇಶದಲ್ಲಿನ ರಸ್ತೆಗಳು ಕೂಡ ಹೇಳ ಹೆಸರಿಲ್ಲದಂತೆ ಮಾಯವಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ