ಇಸ್ಲಾಮಾಬಾದ್, ಮಂಗಳವಾರ, 16 ಫೆಬ್ರವರಿ 2010( 20:09 IST )
ಪುಣೆಯ ಮೇಲೆ ದಾಳಿ ನಡೆಸಿ 10 ಮಂದಿಯ ಸಾವಿಗೆ ಕಾರಣವಾದ ಘಟನೆಯ ಹೊಣೆಯನ್ನು ಪಾಕಿಸ್ತಾನ ಮೂಲದ ಹೊಸ ಭಯೋತ್ಪಾದಕ ಸಂಘಟನೆ 'ಲಷ್ಕರ್ ಇ ತೋಯ್ಬಾ ಅಲ್ ಅಲಾಮಿ' ಹೊತ್ತುಕೊಂಡಿದ್ದು, ಸಂದರ್ಶನವೊಂದರಲ್ಲಿ ಗೃಹ ಸಚಿವ ಪಿ.ಚಿದಂಬರಂ ಉಲ್ಲೇಖಿಸಿದ್ದ ಭಯೋತ್ಪಾದಕ ಅಬು ಜಿಂದಾಲ್ ಹೆಸರು ಕೂಡ ಪ್ರಸ್ತಾಪವಾಗಿದೆ.
ಅಬೂ ಜಿಂದಾಲ್ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿರುವ ವ್ಯಕ್ತಿಯೊಬ್ಬ ತಾನು 'ಲಷ್ಕರ್ ಇ ತೋಯ್ಬಾ ಅಲ್ ಅಲಾಮಿ' ಅಂತಾರಾಷ್ಟ್ರೀಯ ಸಂಘಟನೆಯ ವಕ್ತಾರ ಎಂದು ಹೇಳಿಕೊಂಡಿದ್ದು, ಮುಂಬರುವ ಪಾಕಿಸ್ತಾನದ ಜತೆಗಿನ ಮಾತುಕತೆಯಲ್ಲಿ ಕಾಶ್ಮೀರ ವಿಚಾರವನ್ನು ಸೇರಿಸಲು ಭಾರತ ನಿರಾಕರಿಸಿರುವುದೇ ದಾಳಿಗೆ ಕಾರಣ ಎಂದು ತಿಳಿಸಿದ್ದಾನೆ.
PTI
'ದಿ ಹಿಂದೂ' ಪತ್ರಿಕೆಯ ಇಸ್ಲಾಮಾಬಾದ್ ವರದಿಗಾರನಿಗೆ ಈ ಕರೆ ಮಾಡಲಾಗಿದ್ದು, ದೂರವಾಣಿ ಸಂಖ್ಯೆಯನ್ನು ಪರಿಶೀಲಿಸಿದಾಗ ಇದು ವಜೀರಿಸ್ತಾನ್ ಬುಡಕಟ್ಟು ಪ್ರದೇಶ ಮತ್ತು ವಾಯುವ್ಯ ಸರಹದ್ದು ಪ್ರಾಂತ್ಯದ ಬನ್ನು ಎಂಬಲ್ಲಿಯದ್ದು ಎಂದು ತಿಳಿದು ಬಂದಿದೆ.
ಪತ್ರಿಕೆಯ ವರದಿಗಾರ ಮರಳಿ ಅದೇ ಸಂಖ್ಯೆಗೆ ಕರೆ ಮಾಡಲು ಯತ್ನಿಸಿದಾಗ, ಈ ಸಂಖ್ಯೆಯು ತಾತ್ಕಾಲಿಕವಾಗಿ ಬಳಕೆಯಲ್ಲಿಲ್ಲ ಎಂಬ ಧ್ವನಿಮುದ್ರಿತ ಸಂದೇಶ ಬಂದಿದೆ.
ಕಾಶ್ಮೀರದ ಜಿಹಾದಿಗಳು ಕಾಶ್ಮೀರ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮಾತುಕತೆಯಲ್ಲಿ ನಂಬಿಕೆಯನ್ನಿಟ್ಟಿಲ್ಲ. ಅದರ ಬದಲು ಆ ರಾಜ್ಯವನ್ನು ಭಾರತದ ಭದ್ರತಾ ಪಡೆಗಳಿಂದ ವಶಕ್ಕೆ ತೆಗೆದುಕೊಂಡು ಸ್ವಾತಂತ್ರ್ಯಕ್ಕೊಳಪಡಿಸಬೇಕು ಎನ್ನುವುದು ಅವುಗಳ ನಿಲುವು.
ಕರೆ ಮಾಡಿರುವ ಜಿಂದಾಲ್ ಎಂಬಾತ, ಭಾರತವು ಅಮೆರಿಕಾದೊಂದಿಗೆ ಹೊಂದಿರುವ ಸ್ನೇಹ ಸಂಬಂಧವೂ ದಾಳಿಗೆ ಒಂದು ಕಾರಣ ಎಂದಿದ್ದಾನೆ.
ಪುಣೆ ಮೇಲಿನ ದಾಳಿಗೆ ಬೇರೇನಾದರೂ ಕಾರಣವಿದೆಯೇ ಎಂದು ಪ್ರಶ್ನಿಸಿದಾಗ, 'ಇಲ್ಲಿ ಕೇವಲ ಎರಡು ಕಾರಣಗಳಷ್ಟೇ ಇವೆ. ಅಮೆರಿಕಾದೊಂದಿಗೆ ಮೈತ್ರಿ ಮಾಡಿಕೊಳ್ಳುವ ಯಾವುದೇ ದೇಶದ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಅದು ಭಾರತ ಅಥವಾ ಪಾಕಿಸ್ತಾನ ಯಾವುದಾದರೂ ಇರಬಹುದು' ಎಂದಿದ್ದಾನೆ.
ಪಾಕಿಸ್ತಾನದ ಐಎಸ್ಐ ಹೇಳುತ್ತಿರುವಂತೆ 'ಲಷ್ಕರ್ ಇ ತೋಯ್ಬಾ' ಸಂಘಟನೆ ಕೇಳುತ್ತಿರುವ ಕಾರಣ ಅದರಿಂದ ಬೇರ್ಪಟ್ಟು 'ಲಷ್ಕರ್ ಇ ತೋಯ್ಬಾ ಅಲ್ ಅಲಾಮಿ' ಎಂಬ ಭಯೋತ್ಪಾದನಾ ಗುಂಪನ್ನು ನಾವು ಸ್ಥಾಪಿಸಿಕೊಂಡಿರುವುದಾಗಿ ಆತ ತಿಳಿಸಿದ್ದಾನೆ.
ಕರೆ ಮಾಡಿದ ವ್ಯಕ್ತಿಯ ಧ್ವನಿಯನ್ನು ಗಮನಿಸಿದಾಗ 20 ವರ್ಷದೊಳಗಿನ ಯುವಕನಂತೆ ಕಂಡು ಬಂದಿದೆ. ತಾನು ಉತ್ತರ ವಜಿರಿಸ್ತಾನದ ಮೀರಂಶಾಹ್‌ನಿಂದ ಕರೆ ಮಾಡುತ್ತಿದ್ದೇನೆಂದು ತಿಳಿಸಿದ್ದಾನಾದರೂ, ತಮ್ಮ ಸಂಘಟನೆಯ ಮುಖ್ಯಸ್ಥನ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾನೆ.
ತಾವು ಪುಣೆ ಮೇಲಿನ ದಾಳಿಯನ್ನು ಹೇಗೆ ನಡೆಸಿದ್ದೀರಿ ಎಂದು ವರದಿಗಾರ ಪ್ರಶ್ನಿಸಿದಾಗ, ತಮ್ಮ ಸಂಘಟನೆಯ ಮೂಲಗಳು ಭಾರತದಲ್ಲಿವೆ; ದಾಳಿ ನಡೆಸಲು ಅವರನ್ನು ಕಾರ್ಯಪ್ರವೃತ್ತಗೊಳಿಸಲಾಗಿತ್ತು ಎಂದು ವಿವರಣೆ ನೀಡಿದ್ದಾನೆ.
ಈ ಅಬೂ ಜಿಂದಾಲ್ ಯಾರು? ಕೆಲವು ದಿನಗಳ ಹಿಂದೆ ವಾರ್ತಾವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಭಾರತದ ಗೃಹ ಸಚಿವ ಪಿ. ಚಿದಂಬರಂ ಅವರು, 2008ರ ಮುಂಬೈ ದಾಳಿಯ ಹಿಂದೆ ಭಾರತೀಯನೊಬ್ಬನ ಕೈವಾಡವಿದೆ ಎಂದಿದ್ದರು.
ಈ ಸಂದರ್ಭದಲ್ಲಿ ಅವರ ಬಾಯಿಯಿಂದ ಅಬೂ ಜಿಂದಾಲ್ ಎಂಬ ಹೆಸರೂ ಬಂದಿತ್ತು. ಆತ ಭಯೋತ್ಪಾದಕರಿಗೆ ಸಹಕಾರ ನೀಡಿರಬಹುದು ಅಥವಾ ಆತನ ಹೆಸರು ಬೇರೆ ಇರಬಹುದು. ಅದು ಆತನ ಮೂಲ ಹೆಸರು ಆಗಿರಲಿಕ್ಕಿಲ್ಲ ಎಂದೆಲ್ಲಾ ಹೇಳಿದ್ದರು.
ಪ್ರಸಕ್ತ ಪುಣೆ ದಾಳಿಯ ಹೊಣೆಯನ್ನು ಹೊತ್ತು ಕರೆ ಮಾಡಿದ ವ್ಯಕ್ತಿಯ ಹೆಸರು ಕೂಡ ಅಬೂ ಜಿಂದಾಲ್. ಆದರೆ ಮುಂಬೈ ದಾಳಿಯಲ್ಲಿ ಪಾಲ್ಗೊಂಡ ಭಾರತೀಯ ಎಂದು ಹೇಳಲಾಗುತ್ತಿರುವ ಅಬು ಜಿಂದಾಲ್ ತಾನೇ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಆತ ಹೊರಗೆಡವಿಲ್ಲ.