ಮಿಲಿಟರಿ ಮಾಜಿ ಅಧಿಕಾರಿ ಸರತ್ ಫೋನ್ಸೆಕಾ ಅವರ ಬಂಧನವನ್ನು ವಿರೋಧಿಸಿ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆಯನ್ನು ಶ್ರೀಲಂಕಾ ಸರ್ಕಾರ ಕಾನೂನು ಬಾಹಿರವಾಗಿ ದಮನ ಮಾಡುತ್ತಿರುವುದಾಗಿ ಲಂಕಾ ವಕೀಲರು ಮಂಗಳವಾರ ಗಂಭೀರವಾಗಿ ಆರೋಪಿಸಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸರ್ಕಾರಿ ಪರ ಬೆಂಬಲಿಗರು ಶಸ್ತ್ರ ಸಜ್ಜಿತ ಪೊಲೀಸರ ಎದುರಿನಲ್ಲೇ ದಾಳಿ ನಡೆಸಿರುವುದಾಗಿ ಇಂಡಿಪೆಂಡೆಂಟ್ ಲಾಯರ್ಸ್ ಫಾರ್ ಡೆಮೋಕ್ರಸಿ ತನ್ನ ಪ್ರಕಟಣೆಯಲ್ಲಿ ಆರೋಪಿಸಿದೆ.
ಪ್ರತಿಭಟನಾಕಾರರಿಗೆ ರಕ್ಷಣೆ ಕೊಡಬೇಕಾದ ಪೊಲೀಸರು ಅಸಹಾಯಕರಂತೆ ನಿಂತಿದ್ದು, ಪ್ರತಿಭಟನಾಕಾರರ ಮೇಲೆಯೇ ಗೂಂಡಾಗಳಂತೆ ದಾಳಿ ಮಾಡುತ್ತಿದ್ದರೂ ಕೂಡ ಪೊಲೀಸರು ಮೌನವಾಗಿದ್ದರು. ಈ ಘಟನೆ ತಮಗೆ ಆಘಾತ ತಂದಿರುವುದಾಗಿ ವಕೀಲರ ಸಂಘ ತಿಳಿಸಿದೆ.
ಸರ್ಕಾರಿ ಪರ ಬೆಂಬಲಿಗರೊಂದಿಗೆ ಪೊಲೀಸರು ಸೇರಿಕೊಂಡು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಿದರು. ಫೋನ್ಸೆಕ್ ಬಂಧನವನ್ನು ವಿರೋಧಿಸಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿರುವುದಾಗಿ ಹೇಳಿದೆ.