ಆಕರ್ಷಕರ ಪಟ್ಟಿಯಲ್ಲಿ ಭಾರತೀಯರಿಗೆ ವಿಶ್ವದಲ್ಲೇ 8ನೇ ಸ್ಥಾನ
ಲಂಡನ್, ಬುಧವಾರ, 17 ಫೆಬ್ರವರಿ 2010( 17:06 IST )
ನೂತನ ಸಮೀಕ್ಷೆಯೊಂದರ ಪ್ರಕಾರ ವಿಶ್ವದಲ್ಲೇ ಅತೀ ಆಕರ್ಷಕ ವ್ಯಕ್ತಿತ್ವ ಹೊಂದಿರುವವರ ಸಾಲಿನಲ್ಲಿ ಭಾರತೀಯರು ಎಂಟನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯ ಅಗ್ರ ಸ್ಥಾನ ಅಮೆರಿಕನ್ನರ ಪಾಲಾಗಿದೆ.
5,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ ಈ ಸಮೀಕ್ಷೆಯ ಪ್ರಕಾರ ಹಾಲಿವುಡ್ ನಟ ಜಾರ್ಜ್ ಕ್ಲೂನಿಯವರಿಂದ ನಟಿ ಅಂಜೆಲಿನಾ ಜೂಲಿಯವರೆಗೆ ಹಲವರನ್ನು ಹೊಂದಿರುವ ಅಮೆರಿಕಾ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದರೆ, ಎರಡನೇ ಸ್ಥಾನ ಬ್ರೆಜಿಲ್ ಪಾಲಾಗಿದೆ.
ಹಾಲಿವುಡ್ ನಟಿ ಪೆನೆಲೊಪ್ ಕ್ರೂಜ್ ಮುಂತಾದವರನ್ನು ಹೊಂದಿರುವ ಸ್ಪೇನ್ ಮೂರನೇ ಸ್ಥಾನ ಪಡೆದಿದೆ. ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾ, ನಂತರ ಇಟಲಿ ದೇಶಗಳು ಸ್ಥಾನ ಪಡೆದುಕೊಂಡಿವೆ ಎಂದು ಸಮೀಕ್ಷೆ ತಿಳಿಸಿದೆ.
ಸೆಕ್ಸೀ ನಟಿ ವಿಕ್ಟೋರಿಯಾ ಸಿಲ್ವ್‌ಸ್ಟೆಡ್ತ್ ಸಹಾಯದಿಂದ ಸ್ವೀಡನ್ ಆರನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಏಳನೇ ಸ್ಥಾನ ಪಡೆದಿದೆ.
ಐಶ್ವರ್ಯಾ ರೈ, ಕರೀನಾ ಕಪೂರ್, ಕತ್ರಿನಾ ಕೈಫ್ ಮತ್ತು ಅವರ ಪ್ರಿಯಕರ ಸಲ್ಮಾನ್ ಖಾನ್‌ರಂತಹ ಘಟಾನುಘಟಿ ಸುಂದರ-ಸುಂದರಿಯರನ್ನು ಹೊಂದಿರುವ ಬಾಲಿವುಡ್ ಸಹಕಾರದಿಂದ ಭಾರತ ವಿಶ್ವದಲ್ಲೇ ಎಂಟನೇ ಸ್ಥಾನ ಪಡೆದರೆ, ಫ್ರಾನ್ಸ್ ಮತ್ತು ಕೆನಡಾಗಳು ಅಗ್ರ 10ರೊಳಗೆ ಸ್ಥಾನ ಗಿಟ್ಟಿಸಿಕೊಂಡಿವೆ.
ಉಳಿದಂತೆ ಮೆಕ್ಸಿಕೋ, ಪೋರ್ಚುಗಲ್, ವೇಲ್ಸ್, ರಷ್ಯಾ, ಜಪಾನ್, ಐರ್ಲೆಂಡ್, ಅರ್ಜೆಂಟೀನಾ, ನೆದರ್ಲೆಂಡ್ಸ್, ಸ್ಕಾಟ್ಲೆಂಟ್ ಮತ್ತು ಜರ್ಮನಿಗಳು 11ರಿಂದ 20ರವರೆಗಿನ ಸ್ಥಾನಗಳನ್ನು ಪಡೆದಿವೆ.
ವನ್‌ಪೋಲ್.ಕಾಮ್ ಎಂಬ ವೆಬ್ ಸಮೀಕ್ಷಾ ಸಂಸ್ಥೆ ಈ ಸಮೀಕ್ಷೆಯನ್ನು ನಡೆಸಿದ್ದು, 'ದಿ ಡೈಲಿ ಟೆಲಿಗ್ರಾಫ್' ಪತ್ರಿಕೆ ವರದಿ ಮಾಡಿದೆ.
ಜೆಸ್ಸಿಕಾ ಅಲ್ಬಾ, ಜೆನ್ನಿಫರ್ ಅನಿಸ್ಟನ್ ಮತ್ತು ಬ್ರಾಡ್ ಪಿಟ್‌ರಂತಹ ನಟ-ನಟಿಯರು ಅಮೆರಿಕಾವನ್ನು ಅಗ್ರ ಪಟ್ಟಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಗಿದ್ದಾರೆ ಎಂದು ಸಮೀಕ್ಷೆ ನಡೆಸಿದ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.