ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಮುಖಂಡ ನಮ್ಮ ವಶದಲ್ಲಿದ್ದಾನೆ: ಪಾಕಿಸ್ತಾನ ಸೇನೆ (Pakistan | Afghan Taliban | United States | Mullah Abdul Ghani Baradar)
Bookmark and Share Feedback Print
 
ಅಫ್ಘಾನ್ ತಾಲಿಬಾನ್‌ನ ಎರಡನೇ ನಾಯಕನನ್ನು ಬಂಧಿಸಿರುವುದು ಹೌದು ಎಂದು ಮೊತ್ತ ಮೊದಲ ಬಾರಿ ಪಾಕಿಸ್ತಾನ ಬುಧವಾರ ಒಪ್ಪಿಕೊಂಡಿದ್ದು, ಆತ ಅಮೂಲ್ಯ ಮಾಹಿತಿಗಳನ್ನು ನೀಡುತ್ತಿದ್ದಾನೆ; ಇದನ್ನು ನಾವು ಅಮೆರಿಕಾದೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದೆ.

ಅಮೆರಿಕಾದ ಸಿಐಎ ಮತ್ತು ಪಾಕಿಸ್ತಾನದ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ದಕ್ಷಿಣ ಬಂದರು ನಗರ ಕರಾಚಿಯಲ್ಲಿ ತಾಲಿಬಾನ್ ಕಮಾಂಡರ್ ಮುಲ್ಲಾ ಅಬ್ದುಲ್ ಗನಿ ಬಾರಾದರ್‌ನ್ನು ಇದೇ ತಿಂಗಳ ಆರಂಭದಲ್ಲಿ ಬಂಧಿಸಲಾಗಿತ್ತು ಎಂದು ಅಮೆರಿಕಾ ಮತ್ತು ಪಾಕಿಸ್ತಾನಗಳ ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಬುಧವಾರ ಪಾಕಿಸ್ತಾನ ಸೇನೆಯು ಮೊತ್ತ ಮೊದಲ ಸಾರ್ವಜನಿಕ ಹೇಳಿಕೆ ನೀಡಿದ್ದು, ತಾಲಿಬಾನ್ ನಾಯಕನನ್ನು ಬಂಧಿಸಿರುವುದು ಹೌದು ಎಂದು ತಿಳಿಸಿದೆ.

ವಿಸ್ತೃತವಾದ ಗುರುತು ಹಚ್ಚುವ ಪ್ರಕ್ರಿಯೆಯ ನಂತರ ಬಂಧಿತ ವ್ಯಕ್ತಿಯನ್ನು ಮುಲ್ಲಾ ಬಾರಾದಾರ್ ಎಂದು ನಾವು ಖಚಿತಪಡಿಸಿದ್ದೇವೆ. ಭದ್ರತಾ ಕಾರಣಗಳಿಂದಾಗಿ ಆತನನ್ನು ಬಂಧಿಸಿದ ಸ್ಥಳ ಮತ್ತು ಕಾರ್ಯಾಚರಣೆ ವಿವರಗಳನ್ನು ಬಹಿರಂಗಪಡಿಸಲಾಗುತ್ತಿಲ್ಲ ಎಂದು ಸೇನೆಯ ವಕ್ತಾರ ಮೇಜರ್ ಜನರಲ್ ಅಥರ್ ಅಬ್ಬಾಸ್ ತಿಳಿಸಿದ್ದಾರೆ.

ತಾಲಿಬಾನ್ ಸಂಸ್ಥಾಪಕ ಹಾಗೂ ನಾಯಕ ಮುಲ್ಲಾ ಮೊಹಮ್ಮದ್ ಒಮರ್ ನಂತರದ ಎರಡನೇ ಕಮಾಂಡರ್ ಬಾರಾದಾರ್ ಆಗಿದ್ದು, ಪಾಕಿಸ್ತಾನದಲ್ಲಿನ ವ್ಯವಹಾರಗಳನ್ನು ದಿನವಹೀ ನೋಡಿಕೊಳ್ಳುವಂತೆ ಆತನಿಗೆ ಸೂಚಿಸಲಾಗಿತ್ತು. ಈತ ತಾಲಿಬಾನ್‌ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಸದಸ್ಯನೂ ಹೌದು. 2001ರಲ್ಲಿ ಅಮೆರಿಕಾ ನೇತೃತ್ವದ ಮೈತ್ರಿಕೂಟ ಆರಂಭಿಸಿರುವ ಹೋರಾಟದಲ್ಲಿ ಬಂಧಿತನಾದ ಪ್ರಮುಖ ವ್ಯಕ್ತಿ ಈತ ಎಂದು ಮೂಲಗಳು ಹೇಳಿವೆ.

ಅದೇ ಹೊತ್ತಿಗೆ ಅಮೆರಿಕಾ ಶ್ವೇತಭವನವು ಬಾರಾದಾರ್ ಬಂಧನದ ಕುರಿತು ಖಚಿತ ಮಾಹಿತಿ ನೀಡಲು ನಿರಾಕರಿಸಿದೆ. ಭಯೋತ್ಪಾದಕರ ವಿರುದ್ಧದ ಹೋರಾಟವು ಮಹತ್ವದ ಬೇಹುಗಾರಿಕೆಯನ್ನು ಒಳಗೊಂಡಿರುವುದರಿಂದ ಅದರ ಕುರಿತು ಮಾತನಾಡದೆ ಮಾಹಿತಿಗಳನ್ನು ಕಲೆ ಹಾಕುವುದೇ ಉತ್ತಮ ಎಂದು ತಾನು ನಂಬಿದ್ದೇನೆ ಎಂದು ಶ್ವೇತಭವನದ ವಕ್ತಾರ ರಾಬರ್ಟ್ ಗಿಲ್ಸ್ ಪ್ರತಿಕ್ರಿಯೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ