ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದುಬೈಯಲ್ಲಿ ಹಮಾಸ್ ನಾಯಕನ ಹತ್ಯೆ; ಒತ್ತಡದಲ್ಲಿ 'ಮೊಸಾದ್' (Mossad | Hamas man murder | Dubai | Mahmud al-Mabhuh)
Bookmark and Share Feedback Print
 
ದುಬೈಯಲ್ಲಿ ಹಮಾಸ್ ನಾಯಕನನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಇಸ್ರೇಲ್ ಬೇಹುಗಾರಿಕಾ ಸಂಸ್ಥೆ 'ಮೊಸಾದ್' ತೀವ್ರ ಟೀಕೆಗೊಳಗಾಗುತ್ತಿದ್ದು, ಇತರೆ ದೇಶಗಳ ಪಾಸ್‌ಪೋರ್ಟ್‌ಗಳನ್ನು ನಕಲು ಮಾಡಿ ಕೃತ್ಯವೆಸಗಿದೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮೊಸಾದ್ ಮುಖ್ಯಸ್ಥ ಮಿರ್ ಡಗಾನ್ ತೀವ್ರ ಒತ್ತಡ ಎದುರಿಸುತ್ತಿದ್ದಾರೆ. ಅವರನ್ನು ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಹಮಾಸ್ ಮಿಲಿಟರಿ ವಿಭಾಗದ ಹಿರಿಯ ಅಧಿಕಾರಿ ಮಹಮೌದ್ ಅಲ್ ಮಬೌ ಅವರನ್ನು ಜನವರಿ 20ರಂದು ದುಬೈ ಹೊಟೇಲಿನ ಅವರು ಉಳಿದುಕೊಂಡಿದ್ದ ಕೋಣೆಯಲ್ಲಿ ಕೊಲ್ಲಲಾಗಿತ್ತು. ಇದು ಇಸ್ರೇಲ್ ಗುಪ್ತಚರ ಸಂಸ್ಥೆಯ ಕೃತ್ಯ ಎಂದು ದುಬೈ ಆರೋಪಿಸಿದೆ.

ಯೂರೋಪ್ ಪಾಸ್‌ಪೋರ್ಟ್ ಹೊಂದಿರುವ 11 ಮಂದಿ ಆರೋಪಿಗಳ ಭಾವಚಿತ್ರ ಮತ್ತು ಹೆಸರುಗಳನ್ನು ದುಬೈ ಈ ವಾರ ಬಿಡುಗಡೆ ಮಾಡಿದ್ದು, ಅದರ ಪ್ರಕಾರ ಬ್ರಿಟನ್‌ನ ಆರು ಮಂದಿ, ಐರ್ಲೆಂಡ್‌ನ ಮೂವರು, ಜರ್ಮನಿ ಮತ್ತು ಫ್ರಾನ್ಸ್‌ನ ತಲಾ ಒಬ್ಬೊಬ್ಬರು ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ.

ಜೇಮ್ಸ್ ಲಿಯೋನಾರ್ಡ್ ಕ್ಲಾರ್ಕೆ, ಸ್ಟೀಫನ್ ಡೇನಿಯಲ್ ಹೋಡ್ಸ್, ಪೌಲ್ ಜಾನ್ ಕೀಲೀ, ಮೈಕಲ್ ಲಾರೆನ್ಸ್ ಬಾರ್ನಿ, ಜೋನಾಥನ್ ಲೇವಿಸ್ ಗ್ರಹಾಂ ಮತ್ತು ಮೆಲ್ವಿನ್ ಆಡಂ ಮಿಲ್ಡೀನರ್ ಬ್ರಿಟನ್ ಪ್ರಜೆಗಳೆಂದೂ, ಐರಿಷ್ ಪಾಸ್‌ಪೋರ್ಟ್ ಹೊಂದಿರುವ ಮಹಿಳೆ ಗೇಲ್ ಪೋಲಿಯಾರ್ಡ್, ಮತ್ತಿಬ್ಬರು ಕೆವಿನ್ ಡೇವರಾನ್ ಮತ್ತು ಇವಾನ್ ಡೆನ್ನಿಂಗ್ಸ್ ಎಂದು ದುಬೈ ತಿಳಿಸಿದೆ.

ಎಲ್ಲೆಡೆಗಳಿಂದ ಮೊಸಾದ್ ಮೇಲೆ ಆರೋಪ ಬರುತ್ತಿದ್ದರೂ, ಇಸ್ರೇಲ್ ಮಾತ್ರ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಳ್ಳಲು ನಿರಾಕರಿಸಿದೆ.

ದುಬೈ ಆರೋಪಿಗಳ ಹೆಸರುಗಳನ್ನು ಮತ್ತು ಭಾವಚಿತ್ರಗಳನ್ನು ಬಿಡುಗಡೆ ಮಾಡಿದ ಬೆನ್ನಿಗೆ ಪ್ರತಿಕ್ರಿಯಿಸಿರುವ ಬ್ರಿಟನ್, ಫ್ರಾನ್ಸ್ ಮತ್ತು ಐರ್ಲೆಂಡ್‌ಗಳು ಆರೋಪಿಗಳು ಬಳಸಿರುವ ಪಾಸ್‌ಪೋರ್ಟ್‌ಗಳು ನಕಲಿ ಎಂದಿದೆ. ಅಲ್ಲದೆ ದ್ವಿರಾಷ್ಟ್ರ ಪೌರತ್ವ ಹೊಂದಿರುವ ಇಸ್ರೇಲ್ ಪ್ರಜೆಗಳ ಪಾಸ್‌ಪೋರ್ಟ್‌ಗಳನ್ನು ನಕಲು ಮಾಡಲಾಗಿದೆ ಎಂದು ತಿಳಿಸಿವೆ.

ಈ ನಡುವೆ ಕನಿಷ್ಠ ಐವರು ದ್ವಿರಾಷ್ಟ್ರ ಪೌರತ್ವ ಹೊಂದಿರುವ ಇಸ್ರೇಲಿಗರು ತಮ್ಮ ಪಾಸ್‌ಪೋರ್ಟ್‌ಗಳನ್ನು ಹತ್ಯಾಕೋರರು ನಕಲು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತಾವು ಕೃತ್ಯದಲ್ಲಿ ಭಾಗಿಯಾಗಿರದ ಹೊರತಾಗಿಯೂ ತಮ್ಮ ಪಾಸ್‌ಪೋರ್ಟ್‌ಗಳು ಪ್ರಕರಣದಲ್ಲಿ ಕಾಣಿಸಿಕೊಂಡಿವೆ. ಇಲ್ಲಿ ಪ್ರಕಟಿಸಲಾಗಿರುವ ಭಾವಚಿತ್ರಗಳು ತಮ್ಮವಲ್ಲ. ಇದು 'ಮೊಸಾದ್' ಕುತಂತ್ರ ಎಂದು ಆರೋಪ ಹೊರಿಸಿವೆ.

11 ಮಂದಿ ಆರೋಪಿಗಳು ಹಮಾಸ್ ನಾಯಕ ತಂಗಿದ್ದ ಹೊಟೇಲಿಗೆ ವಿವಿಧ ರೀತಿಯಲ್ಲಿ ನುಗ್ಗುತ್ತಿರುವ ಸಿಸಿಟಿವಿ ತುಣುಕುಗಳನ್ನು ದುಬೈ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಇಸ್ರೇಲ್ ತೀವ್ರ ಒತ್ತಡ ಎದುರಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ