ಇಸ್ಲಾಮಾಬಾದ್, ಗುರುವಾರ, 18 ಫೆಬ್ರವರಿ 2010( 12:14 IST )
ಅಮೆರಿಕ ಮತ್ತು ಪಾಕಿಸ್ತಾನ ಗುಪ್ತಚರ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಲ್ಲಿ ಮತ್ತೊಬ್ಬ ಅಫ್ಘಾನ್ ತಾಲಿಬಾನ್ ಮುಖಂಡನನ್ನು ಸೆರೆ ಹಿಡಿದಿರುವುದಾಗಿ ಫೋಕ್ಸ್ ನ್ಯೂಸ್ ವರದಿ ತಿಳಿಸಿದೆ.
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದಲ್ಲಿ ತಾಲಿಬಾನ್‌ನ ಎರಡನೇ ಪ್ರಮುಖ ಕಮಾಂಡರ್ ಆಗಿದ್ದ ಮುಲ್ಲಾ ಅಬ್ದುಲ್ ಗನಿ ಬಾರ್ದಾರ್ ಎಂಬಾತನನ್ನು ಸೆರೆ ಹಿಡಿದ ಬೆನ್ನಲ್ಲೇ, ಇದೀಗ ಮತ್ತೊಬ್ಬ ಪ್ರಮುಖ ತಾಲಿಬಾನ್ ಉಗ್ರ ಮುಖಂಡ ಮುಲ್ಲಾ ಸಲಾಂ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ಹೇಳಿದೆ.
ಬಾರ್ದಾರ್ ಬಂಧನದ ನಂತರ ತನಿಖೆ ವೇಳೆಯಲ್ಲಿ ನೀಡಿದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪಾಕಿಸ್ತಾನಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ತಿಳಿಸಿದೆ. ಆದರೆ ಸಲಾಂ ಕುರಿತು ಹೆಚ್ಚಿನ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಬಂಧಿತ ಸಲಾಂ 'ಶ್ಯಾಡೋ ಗವರ್ನರ್' ಎಂದೇ ಗುರುತಿಸಿಕೊಂಡಿರುವ ಈತನ ಬಂಧನದ ವಿಷಯ ನಿಜಕ್ಕೂ ತುಂಬಾ ಗಮನಾರ್ಹವಾದದ್ದು ಎಂದು ಅಮೆರಿಕದ ಅಧಿಕಾರಿಗಳು ಫೋಕ್ಸ್ ನ್ಯೂಸ್‌ಗೆ ತಿಳಿಸಿದ್ದಾರೆ.