ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೃಷ್ಣ ಹೇಳಿಕೆಗೆ ಸ್ಪಷ್ಟನೆ ನೀಡಿ: ಭಾರತಕ್ಕೆ ಪಾಕ್ ಆಗ್ರಹ (India | SM Krishna | Foreign Secretary-level talks | Pakistan)
Bookmark and Share Feedback Print
 
ಮುಂದಿನ ವಾರ ನವದೆಹಲಿಯಲ್ಲಿ ನಡೆಯಲಿರುವ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೂ ಮೊದಲು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ನೀಡಿರುವ ಹೇಳಿಕೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪಾಕಿಸ್ತಾನ, ಈ ಸಂಬಂಧ ಸ್ಪಷ್ಟನೆ ನೀಡುವಂತೆ ಭಾರತವನ್ನು ಆಗ್ರಹಿಸಿದೆ.

ಮಾತುಕತೆ ನಡೆಯುವ ಮೊದಲೇ ಫಲಿತಾಂಶದ ಪೂರ್ವ ನಿರ್ಣಯ ಮಾಡಬಾರದು ಅಥವಾ ಅದಕ್ಕೊಂದು ಸೀಮಿತ ಮೇರೆಯನ್ನು ವಿಧಿಸಬಾರದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ಜತೆ ಸಮಗ್ರ ಮಾತುಕತೆ ಪುನರಾರಂಭವಿಲ್ಲ ಮತ್ತು ನಡೆಯಲಿರುವ ಮಾತುಕತೆ ಭಯೋತ್ಪಾದನೆ ಕೇಂದ್ರಿತವಾಗಿರುತ್ತದೆ ಎಂದು ಮುಂಬರುವ ದೆಹಲಿಯಲ್ಲಿನ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಯ ಮೊದಲೇ ಭಾರತದ ವಿದೇಶಾಂಗ ಸಚಿವರು ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ನಮಗೆ ಆತಂಕವನ್ನುಂಟು ಮಾಡಿದೆ. ನಮ್ಮ ನಿಲುವಿಗೆ ಇದು ತದ್ವಿರುದ್ಧವಾಗಿದೆ ಎಂದು ವಿದೇಶಾಂಗ ಕಚೇರಿಯ ವಕ್ತಾರ ಅಬ್ದುಲ್ ಬಾಸಿತ್ ಬುಧವಾರ ತಡರಾತ್ರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಕ್ಕಾಗಿ ನಾವು ಭಾರತ ಸರಕಾರದಿಂದ ಸ್ಪಷ್ಟನೆ ಬಯಸುತ್ತಿದ್ದೇವೆ ಎಂದು ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ಇಸ್ಲಾಮಾಬಾದ್ ನೀಡಿರುವ ಭರವಸೆಗಳಲ್ಲಿ ಪ್ರಗತಿ ಕಾಣದ ಹೊರತು ಪಾಕಿಸ್ತಾನದ ಜತೆ ಸಮಗ್ರ ಮಾತುಕತೆ ಪುನರಾರಂಭವಿಲ್ಲ ಎಂದು ಕೃಷ್ಣ ಸ್ಪಷ್ಟಪಡಿಸಿದ ಬಳಿಕ ಪಾಕಿಸ್ತಾನ ಈ ಪ್ರತಿಕ್ರಿಯೆ ನೀಡಿದೆ.

2008ರ ನವೆಂಬರ್ ತಿಂಗಳಲ್ಲಿನ ಮುಂಬೈ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮಾತುಕತೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಮಾತುಕತೆಯ ಲಕ್ಷಣಗಳು ಕಂಡು ಬರುತ್ತಿದ್ದು, ಫೆಬ್ರವರಿ 25ರಂದು ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಯಲಿದೆ.

ಭಾರತವು ಸಮಗ್ರ ಮಾತುಕತೆಯನ್ನು ನಿರಾಕರಿಸುವ ಹೇಳಿಕೆ ನೀಡಿದ್ದರೆ, ಅತ್ತ ಪಾಕಿಸ್ತಾನವು ಅರ್ಥಪೂರ್ಣ ಮತ್ತು ಫಲಿತಾಂಶವನ್ನು ಆಧರಿಸಿದ ಮಾತುಕತೆಯ ಆಶಾ ಭಾವನೆ ಹೊಂದಿದೆ. ಇದರಲ್ಲಿ ಸಮಗ್ರ ಮಾತುಕತೆಯ ಪುನರಾರಂಭವೂ ಸೇರಿದೆ ಎಂದು ತನ್ನ ಹೇಳಿಕೆಯಲ್ಲಿ ಪಾಕಿಸ್ತಾನ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ