ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ ವಿರೋಧ ಲೆಕ್ಕಿಸದ ಒಬಾಮಾ; ದಲೈ ಲಾಮಾ ಭೇಟಿ (Dalai Lama | human rights | China | Barack Obama)
Bookmark and Share Feedback Print
 
ಚೀನಾದ ತೀವ್ರ ವಿರೋಧದ ನಡುವೆಯೂ ಧರ್ಮಗುರು ದಲೈ ಲಾಮಾ ಅವರನ್ನು ಭೇಟಿಯಾಗಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ, ಟಿಬೆಟ್ ಜನತೆಗಾಗಿನ ಅವರ ಶಾಂತಿಯುತ ಹೋರಾಟವನ್ನು ಪ್ರಶಂಸಿಸಿದ್ದಾರೆ.

ಶ್ವೇತಭವನಕ್ಕೆ ಸ್ವತಃ ಒಬಾಮಾ ಮುಂದೆ ನಿಂತು ಲಾಮಾ ಅವರನ್ನು ಸ್ವಾಗತಿಸಿದ್ದಾರೆ. ಆದರೆ ಚೀನಾ ಜತೆಗಿನ ಸಂಘರ್ಷವನ್ನು ಹೆಚ್ಚಿಸಲಿಚ್ಛಿಸದ ಅಧ್ಯಕ್ಷರು ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದರು ಎಂದು ಮೂಲಗಳು ಹೇಳಿವೆ.

ಆದರೂ ಬೀಜಿಂಗ್‌ನ್ನು ಕೆರಳಿಸುವ ಕೆಲವು ನಡೆಗಳನ್ನು ಒಬಾಮಾ ಅನುಸರಿಸಿದ್ದು, ಟಿಬೆಟ್ ಸಂಸ್ಕೃತಿಯ ರಕ್ಷಣೆ ಮತ್ತು ತನ್ನ ಜನರ ಮಾನವ ಹಕ್ಕುಗಳ ರಕ್ಷಣೆಗೆ ಬೆಂಬಲ ನೀಡುವುದಾಗಿ ಗಡಿಪಾರುಗೊಂಡಿರುವ ಧಾರ್ಮಿಕ ನಾಯಕನಿಗೆ ಅಮೆರಿಕಾ ಅಧ್ಯಕ್ಷ ಗುರುವಾರದ ಭೇಟಿ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

ಚೀನಾ ಸರಕಾರದ ಜತೆ ಮಾತುಕತೆಗೆ ಸಹಕರಿಸಬೇಕೆಂಬ ದಲೈ ಲಾಮಾ ಮನವಿಯನ್ನೂ ಪುರಸ್ಕರಿಸಿರುವ ಒಬಾಮಾ, ಈ ಸಂಬಂಧ ನಾನು ಪ್ರೋತ್ಸಾಹ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

ದಲೈ ಲಾಮಾ ಅಹಿಂಸೆಯ ನಿಲುವಿಗೆ ಬದ್ಧರಾಗಿರುವುದು ಮತ್ತು ಚೀನಾ ಸರಕಾರದ ಜತೆ ಮಾತುಕತೆ ನಡೆಸುವ ಆಸಕ್ತಿ ತೋರಿಸಿರುವುದನ್ನು ಅಧ್ಯಕ್ಷರು ಶ್ಲಾಘಿಸಿದ್ದಾರೆ ಎಂದು 70 ನಿಮಿಷಗಳ ಈ ಮಾತುಕತೆಯ ನಂತರ ಶ್ವೇತಭವನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿನ ಮಾತುಕತೆ ಹೆಚ್ಚಿನ ಪ್ರಗತಿ ಕಂಡಿರದ ಹೊರತಾಗಿಯೂ ಚೀನಾ ಮತ್ತು ದಲೈ ಲಾಮಾ ಅವರ ಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಮಾಲೋಚನೆ ಮುಂದುವರಿಸಬೇಕು ಎಂದು ಒಬಾಮಾ ಹೇಳಿದ್ದಾರೆ.

ಅಮೆರಿಕಾ ಮತ್ತು ಚೀನಾಗಳ ನಡುವೆ ಧನಾತ್ಮಕ ಮತ್ತು ಸಹಕಾರಿ ಸಂಬಂಧದ ಪ್ರಾಮುಖ್ಯತೆಯನ್ನು ಒಬಾಮಾ ಮತ್ತು ದಲೈ ಲಾಮಾ ಒಪ್ಪಿಕೊಂಡಿದ್ದಾರೆ ಎಂದೂ ಶ್ವೇತಭವನ ತಿಳಿಸಿದೆ.

ಚೀನಾದ ಪ್ರಜಾಸತ್ತತೆಯಲ್ಲೇ ಉಳಿದುಕೊಳ್ಳಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಆದರೆ ನಾವು ಆಗ್ರಹಿಸುತ್ತಿರುವ ಅರ್ಥಪೂರ್ಣ ಸ್ವತಂತ್ರ ಅಧಿಕಾರ ನಮಗೆ ಬೇಕು ಎಂದು ದಲೈ ಲಾಮಾರವರು ಶ್ವೇತಭವನದ ಹೊರಗಡೆ ಪ್ರತಿಕ್ರಿಯೆ ನೀಡಿದ್ದಾರೆ.

ದಲೈ ಲಾಮಾರನ್ನು ಅಪಾಯಕಾರಿ ಪ್ರತ್ಯೇಕತಾವಾದಿ ಎಂದು ಪರಿಗಣಿಸಿರುವ ಚೀನಾವು, ಅವರನ್ನು ಅಮೆರಿಕಾ ಅಧ್ಯಕ್ಷರು ಭೇಟಿ ಮಾಡಬಾರದು. ಇದರಿಂದ ಅಮೆರಿಕಾ-ಚೀನಾ ಸಂಬಂಧದ ಮೇಲೆ ದುಷ್ಪರಿಣಾಮ ಬೀಳಲಿದೆ ಎಂದು ಬೆದರಿಕೆ ಹಾಕಿತ್ತು. ಆದರೆ ಇದಕ್ಕೆ ಹೆಚ್ಚು ಮನ್ನಣೆ ಕೊಡದ ಒಬಾಮಾ ಪ್ರಸಕ್ತ ಭಾರತದಲ್ಲಿ ನೆಲೆ ಪಡೆದುಕೊಂಡಿರುವ ಟಿಬೆಟ್ ಧಾರ್ಮಿಕ ಗುರುವನ್ನು ಭೇಟಿ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ