ತನ್ನನ್ನು ತ್ಯಜಿಸಿದ್ದರಿಂದ ಆಕ್ರೋಶಗೊಂಡಿದ್ದ ವ್ಯಕ್ತಿಯೋರ್ವ ತನ್ನ ಭಾರತೀಯ ಮೂಲದ ಮಾಜಿ ಪ್ರಿಯತಮೆಯನ್ನು 20 ಬಾರಿ ಅಮಾನುಷವಾಗಿ ಇರಿದು ಹತ್ಯೆ ಮಾಡಿದ ಪ್ರಕರಣವೊಂದು ಇಂಗ್ಲೆಂಡ್‌ನಿಂದ ವರದಿಯಾಗಿದೆ.
ಬೋ ಎಂಬಲ್ಲಿನ ತನ್ನ ಮನೆಯಲ್ಲಿನ ಅಡುಗೆ ಕೋಣೆಯಲ್ಲಿದ್ದ ಸಂದರ್ಭದಲ್ಲಿ 20 ಬಾರಿ ಚೂರಿಯಿಂದ ಇರಿದು 27ರ ಹರೆಯದ ಕ್ಯಾಮಿಲ್ ಮಥುರಾ ಸಿಂಗ್ ಎಂಬಾಕೆಯನ್ನು ಆಕೆಯ ಮಾಜಿ ಪ್ರಿಯಕರ ಕೊಂದು ಹಾಕಿದ್ದಾನೆ.
ಆಕೆಯನ್ನು ಮರಳಿ ಪಡೆಯಲೆತ್ನಿಸಿದ್ದ ಟ್ರಿನಿಡಾಡ್‌ನ ಪೌಲ್ ಬ್ರಿಸ್ಟಾಲ್ ಎಂಬ 24ರ ಹರೆಯದ ವ್ಯಕ್ತಿ, ಅದು ಸಾಧ್ಯವಾಗದೇ ಇದ್ದಾಗ ಹತ್ಯೆ ಮಾಡಿದ್ದಾನೆ. ಆದರೆ ತಾನು ಕೊಲೆ ಮಾಡಿಲ್ಲ ಎಂದು ಇದೀಗ ಹೇಳುತ್ತಿದ್ದಾನೆ.
ಲಿವರ್‌ಪೂಲ್ ಬೀದಿಯಲ್ಲಿನ ಡೆಲಾಯಿಟ್ ಎಂಬ ಸಂಸ್ಥೆಯಲ್ಲಿ ಮಥುರಾ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ಅದಕ್ಕೂ ಮೊದಲು ಟ್ರಿನಿಡಾಡ್‌ನ ಪ್ರೈಸ್ ವಾಟರ್ ಹೌಸ್ ಕೂಪರ್ಸ್‌ನಲ್ಲಿ ಕಾರ್ಯನಿರ್ವಹಿಸಿದ್ದಳು.
ಟ್ರಿನಿಡಾಡ್‌ನಲ್ಲಿ ಬ್ರಿಸ್ಟಾಲ್‌ನನ್ನು ಭೇಟಿಯಾಗಿದ್ದ ಮಥುರಾ ಬಳಿಕ ಆತನಿಗೆ ಆಪ್ತಳಾಗಿದ್ದಳು. ಆಕೆ 2008ರಲ್ಲಿ ಬ್ರಿಟನ್‌ಗೆ ಬಂದ ನಂತರವೂ ಇವರ ಸಂಬಂಧ ಮುಂದುವರಿದಿತ್ತು. 2009ರ ಆರಂಭದಲ್ಲಿನ ಅವರಿಬ್ಬರ ನಡುವಿನ ಇಮೇಲ್ ಸಂದೇಶಗಳು ಅವರ ನಡುವಿನ ಗಾಢ ಸಂಬಂಧವನ್ನು ಸೂಚಿಸುತ್ತಿದ್ದವು. ಅವರಿಬ್ಬರು ಜತೆಯಾಗಿ ಬಾಳುವ ಕುರಿತು ಕೂಡ ಮಾತುಕತೆ ನಡೆಸಿದ್ದರು ಎಂದು ಸರಕಾರಿ ವಕೀಲರು ತಿಳಿಸಿದ್ದಾರೆ.
ಆದರೆ ತಮ್ಮ ಸಂಬಂಧ ಸುದೀರ್ಘ ಕಾಲ ಮುಂದುವರಿಯುವ ಬಗ್ಗೆ ಸಂಶಯಗೊಂಡಿದ್ದ ಆಕೆ ಇದನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದಳು. ಇದೇ ಕಾರಣದಿಂದ ಮತ್ತೊಬ್ಬ ವ್ಯಕ್ತಿಯನ್ನು ಭೇಟಿಯಾಗಿ ಆತನ ಜತೆ ಸುತ್ತಾಡಲು ತೊಡಗಿದ್ದಳು. ಯಾವ ಕಾರಣಕ್ಕಾಗಿ ಸಂಬಂಧವನ್ನು ಮುರಿಯಲಾಯಿತು ಎಂಬುದನ್ನೂ ತಿಳಿಯದೆ ಒದ್ದಾಡುತ್ತಿದ್ದ ಬ್ರಿಸ್ಟಾಲ್‌ಗೆ ಆಕೆಯನ್ನು ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ. ನಂತರ ಸಾಮಾಜಿಕ ಸಂಪರ್ಕ ತಾಣ ಫೇಸ್‌ಬುಕ್‌ನಲ್ಲೂ ಹೊಸ ಪ್ರಿಯಕರನ ಜತೆಗಿನ ಚಿತ್ರಗಳನ್ನು ಬ್ರಿಸ್ಟಾಲ್ ನೋಡಿದ್ದ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತನ್ನನ್ನು ತ್ಯಜಿಸಲಾಗಿದೆ ಎಂಬುದನ್ನು ಸ್ವೀಕರಿಸಲು ಅಸಾಧ್ಯವಾದ ಬ್ರಿಸ್ಟಾಲ್ ಲಂಡನ್‌ಗೆ ಮರಳಿ ಆಕೆಯನ್ನು ಪಡೆಯಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಬ್ರಿಸ್ಟಾಲ್ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಮಥುರಾ ತನ್ನ ಹೆತ್ತವರಲ್ಲಿ ದೂರಿಕೊಂಡಿದ್ದಳು.
ಅದರ ಮರುದಿನವೇ ಆಕೆಯ ಮನೆಗೆ ತೆರಳಿದ್ದ ಆತ ಏನಾಯಿತು ಎಂದು ಪ್ರಶ್ನಿಸಿದ್ದ. ಆದರೆ ಘಟನೆಯು ಆಕೆ ಕೊಲೆಯಾಗುವುದರೊಂದಿಗೆ ಅಂತ್ಯವಾಗಿದೆ. ಈ ಸಂದರ್ಭದಲ್ಲಿ ಮಥುರಾಳ ಕತ್ತು, ಎದೆ, ಬೆನ್ನು, ಕಾಲು ಹೀಗೆ ಎಲ್ಲಾ ಕಡೆ ಇರಿದು ಗಾಯ ಮಾಡಿದ್ದ. ಸ್ವತಃ ತನ್ನ ಮೇಲೂ ಆತ ಗಾಯ ಮಾಡಿಕೊಂಡಿದ್ದ. ನಂತರ ಅಲ್ಲಿಂದ ತನ್ನ ಕಾರಿನಲ್ಲಿ ಅಪಾಯಕಾರಿಯಾಗಿ ಚಾಲನೆ ಮಾಡುತ್ತಾ ಹೋಗಿ ಅಪಘಾತಕ್ಕೊಳಗಾಗಿದ್ದಾನೆ. ಈ ಸಂದರ್ಭದಲ್ಲಿ ತಾನು ಪ್ರಿಯತಮೆಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದ ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಲಾಗಿದೆ.