ಇಸ್ಲಾಮಾಬಾದ್, ಶುಕ್ರವಾರ, 19 ಫೆಬ್ರವರಿ 2010( 19:11 IST )
ಅಮೆರಿಕ ಮತ್ತು ಪಾಕಿಸ್ತಾನ ಗುಪ್ತಚರ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಅಫ್ಘಾನ್ ತಾಲಿಬಾನ್‌ನ ನಂ.2ಮುಖಂಡ ಹಾಗೂ ಇನ್ನಿಬ್ಬರು ಪ್ರಮುಖ ಉಗ್ರರನ್ನು ಸೆರೆ ಹಿಡಿದಿದ್ದು, ಅವರನ್ನು ಅಮೆರಿಕಕ್ಕೆ ಹಸ್ತಾಂತರ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನದ ಹಿರಿಯ ಸಚಿವರೊಬ್ಬರು ಸ್ಪಷ್ಟಪಡಿಸಿದ್ದಾರೆ.
ಬಂಧಿತ ಮುಲ್ಲಾ ಅಬ್ದುಲ್ ಗನಿ ಬ್ರಾಡರ್‌ನನ್ನು ಪಾಕಿಸ್ತಾನದ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದು, ಈತ ಪ್ರಮುಖ ಉಗ್ರನಾಗಿದ್ದು, ಮತ್ತಿಬ್ಬರು ಪ್ರಮುಖ ಉಗ್ರರನ್ನು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿರುವುದಾಗಿ ಆಂತರಿಕ ಸಚಿವ ರಹಮಾನ್ ಮಲಿಕ್ ತಿಳಿಸಿದ್ದಾರೆ.
ಬಂಧಿತ ಉಗ್ರರು ಪಾಕಿಸ್ತಾನದಲ್ಲಿ ಯಾವುದೇ ಅಪರಾಧ ಎಸಗಿಲ್ಲ ಎಂದಿರುವ ಸಚಿವ, ಮೊದಲು ನಾವು ಗಮನಿಸಬೇಕಾಗಿದ್ದು ಅವರು ಎಲ್ಲಿ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು. ಒಂದು ವೇಳೆ ಪಾಕಿಸ್ತಾನದಲ್ಲಿ ವಿಧ್ವಂಕ ಕೃತ್ಯ ಎಸಗಿದ್ದರೆ ನಾವು ನಮ್ಮ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ.
ಆ ನಿಟ್ಟಿನಲ್ಲಿ ಅವರು ಅಫ್ಘಾನಿಸ್ತಾನದಲ್ಲಿ ದುಷ್ಕೃತ್ಯ ಎಸಗಿದ್ದು ಅವರನ್ನು ಅಫ್ಘಾನಿಸ್ತಾನಕ್ಕೆ ಹಸ್ತಾಂತರಿಸಲಾಗುತ್ತದೆಯೇ ವಿನಃ ಅಮೆರಿಕಕ್ಕೆ ಅಲ್ಲ ಎಂದು ಹೇಳಿದರು.