ಇಸ್ಲಾಮಾಬಾದ್, ಶುಕ್ರವಾರ, 19 ಫೆಬ್ರವರಿ 2010( 20:14 IST )
ಅಂತಾರಾಷ್ಟ್ರೀಯ ಎನ್‌ಜಿಓವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಅಪರಿಚಿತ ಗುಂಪೊಂದು ಅಪಹರಿಸಿಕೊಂಡು ಹೋದ ಘಟನೆ ಬಲೂಚಿಸ್ತಾನದ ನೈರುತ್ಯ ಪ್ರದೇಶದಲ್ಲಿ ಶುಕ್ರವಾರ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮರ್ಸಿ ಕಾರ್ಪೋರೇಶನ್‌ನಲ್ಲಿ ನಾಲ್ಕು ಮಂದಿ ಕಾರ್ಯನಿರ್ವಹಿಸುತ್ತಿದ್ದು, ಅವರು ಬಲೂಚಿಸ್ತಾನದ ಜೋಬ್‌ನಿಂದ ಕ್ವೆಟ್ಟಾಗೆ ತೆರಳುತ್ತಿದ್ದಾಗ ಕ್ವಿಲ್ಲಾ ಸೈಪುಲ್ಲಾ ಪ್ರದೇಶ ಸಮೀಪ ವಾಹನವನ್ನು ತಡೆದ ಅಪರಿಚಿತ ಗುಂಪೊಂದು ಅವರನ್ನು ಅಪಹರಿಸಿರುವುದಾಗಿ ಹೇಳಿದ್ದಾರೆ.
ಅಪಹೃತಗೊಂಡವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಬಲೂಚಿಸ್ತಾನ್ ಗೃಹ ಕಾರ್ಯದರ್ಶಿ ಅಕ್ಬರ್ ದುರ್ರಾನಿ ತಿಳಿಸಿದ್ದಾರೆ. ನಾಲ್ಕು ಮಂದಿ ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ. ಆದರೆ ಅಪಹರಣಕಾರರಿಂದ ಈವರೆಗೂ ಯಾವುದೇ ಬೇಡಿಕೆ ಬಂದಿಲ್ಲ ಎಂದು ತಿಳಿಸಿದರು.