ಇಸ್ಲಾಮಾಬಾದ್, ಶನಿವಾರ, 20 ಫೆಬ್ರವರಿ 2010( 12:01 IST )
ಅಮೆರಿಕದ ಪಡೆಗಳು ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆಸಿದ ಮಿಸೈಲ್ ದಾಳಿಯಲ್ಲಿ ಅಫ್ಘಾನಿಸ್ತಾನ್ ತಾಲಿಬಾನ್ ಮುಖಂಡನ ಪುತ್ರನೊಬ್ಬ ಬಲಿಯಾಗಿರುವುದಾಗಿ ಭದ್ರತಾ ಪಡೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಅಫ್ಘಾನ್ ಗಡಿಪ್ರದೇಶದ ಉತ್ತರ ವಜಿರಿಸ್ತಾನದ ಪಶ್ತುನ್ ಬುಡಕಟ್ಟು ಪ್ರಾಂತ್ಯದಲ್ಲಿ ತಾಲಿಬಾನ್‌ನ ಹಕ್ಕಾನಿ ಉಗ್ರರ ನೆಲೆಗಳ ಮೇಲೆ ಅಮೆರಿಕ ಪಡೆಯ ಪೈಲಟ್ ರಹಿತ ಡ್ರೋನ್ ದಾಳಿಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದರು.
ಈ ದಾಳಿಯಲ್ಲಿ ಹಕ್ಕಾನಿ ಜಾಲದ ಮುಖಂಡ ಜಲಾಲುದ್ದೀನ್ ಹಕ್ಕಾನಿ ಪುತ್ರ ಮೊಹಮ್ಮದ್ ಹಕ್ಕಾನಿ ಸಾವನ್ನಪ್ಪಿದ್ದಾನೆ. ಹಕ್ಕಾನಿ ಸಂಘಟನೆ ಅಲ್ ಖಾಯಿದಾದೊಂದಿಗೂ ಸಂಪರ್ಕ ಹೊಂದಿದೆ. ಈ ಸಂಘಟನೆ ಅಫ್ಘಾನಿಸ್ತಾನದಲ್ಲಿ ಹಲವು ಭೀಕರ ದಾಳಿಗಳನ್ನು ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಹಕ್ಕಾನಿ ಮತ್ತೊಬ್ಬ ಪುತ್ರನಾಗಿರುವ ಸಿರಾಜುದ್ದೀನ್ ಹಕ್ಕಾನಿಯ ಮೇಲೆ ದಾಳಿ ನಡೆಸಲು ಅಮೆರಿಕ ಪ್ರಮುಖ ಉದ್ದೇಶವನ್ನು ಹೊಂದಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.