ಇಸ್ಲಾಮಾಬಾದ್, ಶನಿವಾರ, 20 ಫೆಬ್ರವರಿ 2010( 12:30 IST )
ಅಫ್ಘಾನಿಸ್ತಾನದ ಗಡಿಭಾಗದಲ್ಲಿ ಪಾಕಿಸ್ತಾನ ಮಿಲಿಟರಿ ಪಡೆ ಕೈಗೊಂಡ ವೈಮಾನಿಕ ದಾಳಿ ಕಾರ್ಯಾಚರಣೆಯಲ್ಲಿ ಮೂವತ್ತು ಮಂದಿ ಉಗ್ರರು ಶನಿವಾರ ಹತರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ವಜಿರಿಸ್ತಾನದ ಶಾವಲ್ ಪರ್ವತ ಪ್ರದೇಶದ ಸಮೀಪ ಉಗ್ರರು ಅಡಗಿದ್ದಾರೆಂದು ಮಾಹಿತಿದಾರನೊಬ್ಬ ನೀಡಿದ ಸುಳಿವಿನ ಮೇರೆಗೆ ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರರು ಬಲಿಯಾಗಿರುವುದಾಗಿ ಮಿಲಿಟರಿ ಪ್ರಕಟಣೆಯಲ್ಲಿ ಹೇಳಲಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ.
ಶಾವಲ್ ಪ್ರದೇಶ ಅಲ್ ಖಾಯಿದಾ ಮತ್ತು ತಾಲಿಬಾನ್ ಉಗ್ರರ ಪ್ರಾಬಲ್ಯ ಹೊಂದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಆ ನಿಟ್ಟಿನಲ್ಲಿ ಪಾಕ್ ಮಿಲಿಟರಿ ಪಡೆ ಕಾರ್ಯಾಚರಣೆ ನಡೆಸಿದೆ. ಏತನ್ಮಧ್ಯೆ ಅಫ್ಘಾನ್ ಬುಡಕಟ್ಟು ಪ್ರದೇಶದಲ್ಲಿ ಕಾರ್ಯಾಚರಣೆ ಅಂತ್ಯಗೊಳಿಸಿರುವುದಾಗಿ ಡಿಸೆಂಬರ್‌ನಲ್ಲಿ ಸರ್ಕಾರ ಘೋಷಿಸಿತ್ತು. ಆದರೆ ಮಿಲಿಟರಿ ಪಡೆಗಳು ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ್ದರು.