ಇಂಟರ್ನೆಟ್ ಸರ್ಚ್ ಇಂಜಿನ್ ದೈತ್ಯ ಗೂಗಲ್ ಮೇಲಿನ ಸೈಬರ್ ದಾಳಿಯಲ್ಲಿ ತನ್ನ ಪಾತ್ರವಿದೆ ಎಂಬ ಮಾಧ್ಯಮ ವರದಿಗಳು ಬೇಜವಾಬ್ದಾರಿತನದ್ದು ಎಂದು ಚೀನಾ ಮಿಲಿಟರಿ ಶನಿವಾರ ಖಾರವಾಗಿ ಪ್ರತಿಕ್ರಿಯಿಸಿದೆ.
ಸೈಬರ್ ದಾಳಿಗಳ ಕುರಿತು ಚೀನಾ ಸರಕಾರ ಮತ್ತು ಚೀನಾ ಮಿಲಿಟರಿ ಮೇಲೆ ಆರೋಪ ಹೊರಿಸುತ್ತಿರುವುದು ಬೇಜವಾಬ್ದಾರಿತನ ಎಂದು ಚೀನಾ ಮಿಲಟರಿ ವಿಜ್ಞಾನ ಅಕಾಡೆಮಿ ಮೇಜರ್ ಜನರಲ್ ಲೂ ಯಾನ್ ತಿಳಿಸಿದ್ದಾರೆ.
ಯಾವುದೇ ರೀತಿಯ ಹ್ಯಾಕಿಂಗ್‌ಗಳನ್ನು ಸಹಿಸಲಾಗುವುದಿಲ್ಲ ಎಂಬುದನ್ನು ಚೀನಾ ಹಲವು ಬಾರಿ ಹೇಳುತ್ತಲೇ ಬಂದಿದೆ. ಇಂತಹ ಕಾರ್ಯ ಚಟುವಟಿಕೆಗಳು ಕಾನೂನು ವಿರೋಧಿ ಕೂಡ. ಇಂತಹ ನಿಯಮಗಳ ವಿರುದ್ಧ ಮಿಲಿಟರಿ ಕೂಡ ಹೋಗುವುದಿಲ್ಲ ಎಂದು ಲೂ ಹೇಳಿದ್ದಾರೆ.
ಚೀನಾದ ಎರಡು ವಿದ್ಯಾ ಸಂಸ್ಥೆಗಳಾದ ಶಾಂದಾಂಗ್ ಪ್ರಾಂತ್ಯದ ಜಿನಾನ್‌ನಲ್ಲಿನ ಲಾನ್‌ಕ್ಸಿಯಾಂಗ್ ವೊಕೇಷನಲ್ ಸ್ಕೂಲ್ ಮತ್ತು ಶಾಂಘೈ ಜಿಯಾತೂಂಗ್ ಯುನಿವರ್ಸಿಟಿಗಳು ಅಮೆರಿಕಾದ ಸಂಸ್ಥೆಗಳ ಮೇಲಿನ ಆನ್‌ಲೈನ್ ದಾಳಿಗಳಿಗೆ ಸಹಕರಿಸಿದ್ದವು ಎಂದು ಗುರುವಾರ ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯೊಂದರಲ್ಲಿ ಹೇಳಿತ್ತು.
ಲಾನ್‌ಕ್ಸಿಯಾಂಗ್ ಯುನಿವರ್ಸಿಟಿಯು ಚೀನಾ ಮಿಲಿಟರಿ ಮತ್ತು ಗೂಗಲ್ ಪ್ರತಿಸ್ಪರ್ಧಿಯೆಂದು ಪರಿಗಣಿಸಲಾಗುವ ಚೀನಾದ ಆನ್‌ಲೈನ್ ಸರ್ಚ್ ಇಂಜಿನ್ 'ಬೈದು' ಜತೆ ನಿಕಟ ಸಂಬಂಧಗಳನ್ನು ಹೊಂದಿದೆ ಎಂದೂ ಪತ್ರಿಕೆ ಹೇಳಿತ್ತು.
ಡಿಸೆಂಬರ್ ಮಧ್ಯಭಾಗದಲ್ಲಿ ಚೀನಾದೊಳಗಿನಿಂದ ತನ್ನ ಮೇಲೆ ಪೂರ್ವನಿಯೋಜಿತ ಹಾಗೂ ಗುರಿಯಾಗಿಸಿಕೊಂಡ ದಾಳಿ ನಡೆದಿದೆ ಎಂದು ಕಳೆದ ತಿಂಗಳು ಆರೋಪಿಸಿದ್ದ ಗೂಗಲ್, ಚೀನಾದಲ್ಲಿನ ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸುವ ಬೆದರಿಕೆಯನ್ನೂ ಹಾಕಿತ್ತು. ಇದು ಅಮೆರಿಕಾ-ಚೀನಾದ ಸಂಬಂಧಗಳ ಮೇಲೂ ದುಷ್ಪರಿಣಾಮ ಬೀರಿತ್ತು.