ಇಸ್ಲಾಮಾಬಾದ್, ಶನಿವಾರ, 20 ಫೆಬ್ರವರಿ 2010( 18:07 IST )
ಮುಂಬೈ ಭಯೋತ್ಪಾದನಾ ದಾಳಿ ಆರೋಪಿಗಳ ವಿರುದ್ಧದ ಇಂದಿನ ವಿಚಾರಣೆಯನ್ನೂ ಮುಂದೂಡಿರುವ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಮಾರ್ಚ್ ಆರಕ್ಕೆ ನಿಗದಿಪಡಿಸಿದೆ.
ಲಷ್ಕರ್ ಇ ತೋಯ್ಬಾದ ಮುಖ್ಯಸ್ಥ ಝಾಕೀರ್ ರೆಹ್ಮಾನ್ ಲಖ್ವಿ ಮತ್ತು ಇತರ ಆರು ಶಂಕಿತರ ವಿರುದ್ಧದ ವಿಚಾರಣೆ ಇಂದು ರಾವಲ್ಪಿಂಡಿಯಲ್ಲಿನ ನ್ಯಾಯಾಲಯದಲ್ಲಿ ನಡೆಯಬೇಕಿತ್ತು. ಆದರೆ ಸ್ಥಳೀಯ ಬಾರ್ ಕೌನ್ಸಿಲ್ ಚುನಾವಣೆ ಕಾರಣದಿಂದ ವಿಚಾರಣೆಯನ್ನು ರದ್ದು ಮಾಡಲಾಗಿದೆ.
ಪ್ರವಾದಿ ಮೊಹಮ್ಮದ್ ಹುಟ್ಟುಹಬ್ಬ ಈದ್ ಮಿಲಾದ್ ಪ್ರಯುಕ್ತ ಫೆಬ್ರವರಿ 27ರ ಶನಿವಾರ ಸಾರ್ವಜನಿಕ ರಜಾದಿನವಾಗಿರುವುದರಿಂದ ನಿಗದಿತ ವಿಚಾರಣೆ ಅಂದು ಕೂಡ ನಡೆಯಲು ಸಾಧ್ಯವಿಲ್ಲ. ಹಾಗಾಗಿ ಮುಂಬೈ ದಾಳಿ ಪ್ರಕರಣದ ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ಹೇಳಿವೆ.
ರಾವಲ್ಪಿಂಡಿಯಲ್ಲಿನ ಅಡಿಯಾಲಾ ಜೈಲಿನಲ್ಲಿನ ವಿಶೇಷ ನ್ಯಾಯಾಲಯದಲ್ಲಿ ನಡೆಯಬೇಕಿದ್ದ ವಿಚಾರಣೆಯನ್ನು ಕಳೆದ ವಾರವೂ ಮುಂದೂಡಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಾಧೀಶರು ಇತರ ಕೆಲಸದಲ್ಲಿ ವ್ಯಸ್ತರಾಗಿದ್ದುದರಿಂದ ಪ್ರಕರಣದ ವಿಚಾರಣೆ ನಡೆಸದೆ ಮುಂದೂಡಿದ್ದರು.
2008ರ ನವೆಂಬರ್ ತಿಂಗಳಲ್ಲಿ ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ನಡೆದ ದಾಳಿಯ ಹಿಂದೆ ಲಖ್ವಿ, ಜರಾರ್ ಶಾ, ಅಬು ಅಲ್ ಖಾಮಾ, ಹಮಾದ್ ಅಮೀನ್ ಸಾದಿಕ್, ಶಾಹಿದ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಮತ್ತು ಯೂನಸ್ ಅಂಜುಮ್ ಮುಂತಾದವರ ಕೈವಾಡವಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಪ್ರಕರಣದಿಂದ ತನ್ನನ್ನು ಮುಕ್ತನನ್ನಾಗಿಸಬೇಕು ಎಂದು ಆರೋಪಿಗಳಲ್ಲೊಬ್ಬನಾದ ಲಖ್ವಿ ಲಾಹೋರ್ ಹೈಕೋರ್ಟ್ ಮೊರೆ ಹೋಗಿರುವುದರಿಂದ ಅಲ್ಲಿನ ತೀರ್ಪು ಬರದ ಹೊರತು ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಆರಂಭಿಸುವ ಸಾಧ್ಯತೆಗಳಿಲ್ಲ ಎಂದು ಆತನ ವಕೀಲ ಖ್ವಾಜಾ ಸುಲ್ತಾನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.