ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಎಣೆ ಇಲ್ಲದಂತಾಗಿದ್ದು, ಪಾಕಿಸ್ತಾನ್- ಅಫ್ಘಾನಿಸ್ತಾನದ ಗಡಿಯಲ್ಲಿನ ಬುಡಕಟ್ಟು ಪ್ರದೇಶದಲ್ಲಿ ಇಬ್ಬರು ಸಿಖ್‌ರ ಶಿರಚ್ಛೇದನ ಮಾಡಿ ರುಂಡವನ್ನು ಪಾಕ್ ಗುರುದ್ವಾರಕ್ಕೆ ಕಳುಹಿಸಿಕೊಟ್ಟಿರುವ ಅಮಾನವೀಯ ಘಟನೆ ನಡೆದಿದೆ.
ತಿರಾ ಕಣಿವೆ ಪ್ರದೇಶದಿಂದ ಉದ್ಯಮಿಗಳಾದ ಜಸ್ಪಾಲ್ ಸಿಂಗ್ ಮತ್ತು ಮಹಾನ್ ಸಿಂಗ್ ಎಂಬಿಬ್ಬರನ್ನು ತಾಲಿಬಾನ್ ಉಗ್ರರು ಜನವರಿ 19ರಂದು ಅಪಹರಿಸಿ ಭಾರೀ ಮೊತ್ತದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಅಲ್ಲದೇ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿವಂತೆಯೂ ಇಲ್ಲದಿದ್ದರೆ ಸಾಯಲು ತಯಾರಾಗಿ ಎಂಬ ಒತ್ತಡ ಹೇರಿದ್ದಾರೆಂದು ಭಾರತೀಯ ಭದ್ರತಾ ಪಡೆಯ ಮೂಲಗಳು ತಿಳಿಸಿವೆ.
ಆದರೆ ಇಸ್ಲಾಂಗೆ ಮತಾಂತರ ಹೊಂದಲು ನಿರಾಕರಿಸಿದ ಪರಿಣಾಮ ಇಬ್ಬರ ತಲೆಗಳನ್ನು ಕಡಿದ ತಾಲಿಬಾನಿ ನರಹಂತಕರು ಎರಡು ರುಂಡಗಳನ್ನು ಪೇಶಾವರದ ಭಾಯಿ ಜೋಗಾ ಸಿಂಗ್ ಗುರುದ್ವಾರಕ್ಕೆ ರವಾನಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ತಾಲಿಬಾನ್ ಉಗ್ರರ ಹಿಡಿತದಲ್ಲಿ ಇನ್ನೂ ಕೆಲವು ಸಿಖ್ ಸಮುದಾಯದ ಜನರು ಒತ್ತೆಯಾಳುಗಳಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತೆಹ್ರೀಕ್ ಇ ತಾಲಿಬಾನ್ ಉಗ್ರರು ಬಾರಾ ಪ್ರದೇಶದಿಂದ ಹಲವು ಸಿಖ್‌ರನ್ನು ಅಪಹರಿಸಿದ್ದು, ಸುಮಾರು 30ಮಿಲಿಯನ್ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಇಸ್ಲಾಂ ಮತಕ್ಕೆ ಮತಾಂತರ ಹಾಗೂ ಒತ್ತೆ ಹಣದ ಬೇಡಿಕೆಯನ್ನು ನಿಗದಿಪಡಿಸಿದ ಗಡುವಿನೊಳಗೆ ಈಡೇರಿಸದ ಪರಿಣಾಮ ಇಬ್ಬರ ಸಿಖ್‌ರ ತಲೆ ಕಡಿದು ಗುರುದ್ವಾರಕ್ಕೆ ಕಳುಹಿಸಿದ್ದಾರೆ.
ಇದೀಗ ಗುರ್‌ವಿಂದರ್ ಸಿಂಗ್ ಮತ್ತು ಗುರ್ಜಿತ್ ಸಿಂಗ್ ಇಬ್ಬರೂ ಉಗ್ರರ ವಶದಲ್ಲಿದ್ದಾರೆ. ಅಪಹರಣ ಮಾಡಿ ಕರೆದೊಯ್ದಿರುವ ಬುಡಕಟ್ಟು ಪ್ರದೇಶದ ಮೇಲೆ ಸರ್ಕಾರದ ಯಾವುದೇ ಹಿಡಿತವಿಲ್ಲ, ಅಲ್ಲಿ ತಾಲಿಬಾನ್ ಉಗ್ರರದ್ದೇ ಪ್ರಾಬಲ್ಯ ಹೆಚ್ಚು ಎಂದು ಮಿಲಿಟರಿ ಮೂಲಗಳು ಹೇಳಿವೆ.