ಪ್ಲಾಯಾ ಡೆಲ್ ಕಾರ್ಮೆನ್, ಸೋಮವಾರ, 22 ಫೆಬ್ರವರಿ 2010( 11:09 IST )
ಕಳೆದ ತಿಂಗಳು ಕೆರೆಬಿಯನ್ ದ್ವೀಪರಾಷ್ಟ್ರದ ಹೈಟಿಯಲ್ಲಿ ಸಂಭವಿಸಿದ ಭೀಕರ ಭೂಕಂಪನದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇದೀಗ 3ಲಕ್ಷಕ್ಕೆ ಏರಿರುವುದಾಗಿ ಅಧ್ಯಕ್ಷ ರಾನೆ ಪ್ರಿವಾಲ್ ಭಾನುವಾರ ತಿಳಿಸಿದ್ದಾರೆ.
ಭೂಕಂಪನದಿಂದ ಬೀದಿಗಳಲ್ಲಿ ಬಿದ್ದ ಸುಮಾರು 2ಲಕ್ಷಕ್ಕೂ ಅಧಿಕ ಶವಗಳನ್ನು ಹೂಳಲಾಗಿದೆ. ಅಲ್ಲದೇ ಇನ್ನೂ ಕೂಡ ಅವಶೇಷಗಳಡಿಯಲ್ಲಿ ಮೃತದೇಹಗಳು ಇದ್ದಿರುವುದಾಗಿ ಮೆಕ್ಸಿಕೋದಲ್ಲಿ ಲ್ಯಾಟಿನ್ ಅಮೆರಿಕ ಮತ್ತು ಕೆರೆಬಿಯನ್ ಮುಖಂಡರ ಜೊತೆಗಿನ ಮಾತುಕತೆ ವೇಳೆಯಲ್ಲಿ ಪ್ರಿವಾಲ್ ಹೇಳಿದ್ದು, ಒಟ್ಟಾರೆ ಸಾವಿನ ಸಂಖ್ಯೆ 3ಲಕ್ಷಕ್ಕೆ ಏರಿರುವುದಾಗಿ ವಿವರಿಸಿದರು.
ಕೆರೆಬಿಯನ್ ರಾಷ್ಟ್ರದ ಆಧುನಿಕ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಭೂಕಂಪ ಇದಾಗಿದ್ದು, 2004ರಲ್ಲಿ ಸಂಭವಿಸಿದ ತ್ಸುನಾಮಿಗಿಂತಲೂ ಭಯಾನಕವಾದದ್ದು ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಭೂಕಂಪದಿಂದ ನೆಲಸಮವಾದ ಮನೆಗಳ ಪುನರ್ ನಿರ್ಮಾಣಕ್ಕಾಗಿ ಇಂಟರ್ ಅಮೆರಿಕನ್ ಡೆವಲಪ್‌ಮೆಂಟ್ ಬ್ಯಾಂಕ್ ಈಗಾಗಲೇ 14ಬಿಲಿಯನ್ ಡಾಲರ್ ನೆರವು ನೀಡಿರುವುದಾಗಿ ತಿಳಿಸಿದರು. ಆದರೆ ಪುನರ್ ವಸತಿಗಾಗಿ ಮತ್ತಷ್ಟು ಆರ್ಥಿಕ ನೆರವಿನ ಅಗತ್ಯವಿರುವುದಾಗಿ ಮಾತುಕತೆ ಸಂದರ್ಭ ಹೇಳಿದರು.
ಸುಮಾರು 250,000 ಮನೆಗಳು ನೆಲಸಮವಾಗಿದ್ದು, 1.5ಮಿಲಿಯನ್ ಜನರು ತಾತ್ಕಾಲಿಕ ಶೆಡ್‌ಗಳಲ್ಲಿ ವಾಸ್ತವ್ಯ ಹೂಡಿರುವುದಾಗಿ ತಿಳಿಸಿದರು. ಆ ನಿಟ್ಟಿನಲ್ಲಿ ತುರ್ತು ನೆರವಿನ ಅಗತ್ಯವಿದೆ ಎಂದರು.