ಫೋನ್ಸೆಕಾ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ: ಅನೋಮಾ
ಕೊಲಂಬೊ, ಸೋಮವಾರ, 22 ಫೆಬ್ರವರಿ 2010( 18:53 IST )
ಶ್ರೀಲಂಕಾ ಅಧ್ಯಕ್ಷ ಮಹೀಂದಾ ರಾಜಪಕ್ಸೆ ಕೊಲೆಗೆ ಸಂಚು ನಡೆಸಿದ್ದಾರೆಂಬ ಆರೋಪದ ಮೇಲೆ ಮಿಲಿಟರಿ ವಶದಲ್ಲಿರುವ ಸರತ್ ಫೋನ್ಸೆಕಾ, ಏಪ್ರಿಲ್ 8ರಂದು ನಡೆಯಲಿರುವ ಸಂಸತ್ ಚುನಾವಣೆಗೆ ಡೆಮೊಕ್ರಟಿಕ್ ನ್ಯಾಶನಲ್ ಅಲೆಯನ್ಸ್ ಪಕ್ಷದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಲಂಕಾ ಅಧ್ಯಕ್ಷ ರಾಜಪಕ್ಸೆ ಅವರ ಕೊಲೆಗೆ ಸಂಚು ನಡೆಸಿದ್ದಾರೆಂಬ ಆರೋಪದ ಮೇಲೆ 58ರ ಹರೆಯದ ಫೋನ್ಸೆಕಾ ಅವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಜೆವಿಪಿ ಮುಖಂಡರಾಗಿರುವ ಜನರಲ್ ಫೋನ್ಸೆಕಾ ಅವರು ಕೊಲಂಬೊದಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆಂದು ಜೆವಿಪಿ ಹಿರಿಯ ಮುಖಂಡ ವಿಜಿತಾ ಹೆರಾತ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಫೋನ್ಸೆಕಾ ಪತ್ನಿ ಅನೋಮಾ, ಕೊಲಂಬೊದಿಂದ ಫೋನ್ಸೆಕಾ ಅವರು ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಎಂದರು.