ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ ಸಾಲದು, ಭಾರತಕ್ಕೆ ಜಿಹಾದೇ ಮದ್ದು: ಸಯೀದ್ (jihad | Jamaat-ud-Dawa | Hafiz Mohd Saeed | Mumbai terror attacks)
Bookmark and Share Feedback Print
 
'ಒಂದು ಮುಂಬೈ ದಾಳಿ ಸಾಲದು' ಎಂದು 2008ರ ಭಯಾನಕ ನರಮೇಧವನ್ನು ಉಲ್ಲೇಖಿಸಿರುವ ಪಾಕಿಸ್ತಾನ ಮೂಲದ 'ಜಮಾತ್ ಉದ್ ದಾವಾ' ಮುಖ್ಯಸ್ಥ ಹಫೀಜ್ ಸಯೀದ್, ಭಾರತದ ಮೇಲೆ ಭರಪೂರ ಜಿಹಾದ್ ದಾಳಿಗಳನ್ನು ನಡೆಸುವಂತೆ ತನ್ನ ಅನುಯಾಯಿ ಮತಾಂಧರಿಗೆ ಕರೆ ನೀಡಿದ್ದಾನೆ.

ಲಾಹೋರ್‌ನಲ್ಲಿ ನಡೆದ 'ಸ್ವತಂತ್ರ ಕಾಶ್ಮೀರ' ಆಂದೋಲನದಲ್ಲಿ ತನ್ನ ಸಾವಿರಾರು ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಯೀದ್, 'ಎಲ್ಲಾ ಸಮಸ್ಯೆಗಳಿಗೆ ಇರುವುದು ಒಂದೇ ಪರಿಹಾರ, ಅದು ಭಾರತ ವಶದಲ್ಲಿರುವ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವುದು. ಅದನ್ನು ಹೊರತುಪಡಿಸಿದ ಮತ್ತೊಂದು ಆಯ್ಕೆಯೆಂದರೆ ಅದು ಜಿಹಾದ್ ಮಾತ್ರ' ಎಂದಿದ್ದಾನೆ.

ಭಾರತವನ್ನುದ್ದೇಶಿಸಿ ಆಕ್ರೋಶದಿಂದ ಭಾಷಣ ಮಾಡುತ್ತಿದ್ದ ಮುಂಬೈ ದಾಳಿ ಆರೋಪಿ, ಭಯೋತ್ಪಾದಕ ಮುಖಂಡ, 'ನಿಮಗೆ ಮುಂಬೈಯನ್ನು ಮರೆಯಲು ಸಾಧ್ಯವಿಲ್ಲ. ನಾವು ಪೂರ್ವ ಪಾಕಿಸ್ತಾನವನ್ನು ಮರೆಯುವುದಿಲ್ಲ. ಒಂದು ಮುಂಬೈ ದಾಳಿ ಯಾವ ಲೆಕ್ಕ' ಎಂದು ಇನ್ನಷ್ಟು ದಾಳಿಗಳನ್ನು ಬಯಸುತ್ತಿರುವುದನ್ನು ಸೂಚ್ಯವಾಗಿ ತಿಳಿಸಿದ್ದಾನೆ.

ಸ್ವಯಂಚಾಲಿತ ಬಂದೂಕುಗಳನ್ನು ಹೊಂದಿದ್ದ ಸುಮಾರು 10,000ಕ್ಕೂ ಹೆಚ್ಚು ಭಯೋತ್ಪಾದಕರು ಈ ಲಾಹೋರ್ ರ‌್ಯಾಲಿಯಲ್ಲಿ ಭಾಗವಹಿಸಿದ್ದು, ಭಾರತ-ಪಾಕ್ ನಡುವಿನ ಮಾತುಕತೆ ಆರಂಭಕ್ಕೂ ಮುನ್ನ ಜಿಹಾದ್‌ಗೆ ಕರೆ ನೀಡುವ ಮೂಲಕ ಸರಕಾರಗಳಿಗೆ ಸಯೀದ್ ಆತಂಕ ಹುಟ್ಟಿಸಿದ್ದಾನೆ ಎಂದೇ ವಿಶ್ಲೇಷಣೆ ನಡೆಸಲಾಗುತ್ತಿದೆ.
PTI


1985ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ 'ಮರ್ಕಜ್ ದಾವಾ ವಾಲ್ ಇರ್ಷಾದ್' ಸಂಘಟನೆಯು 'ಲಷ್ಕರ್ ಇ ತೋಯ್ಬಾ' ನಿಷೇಧದ ನಂತರ ಹೆಸರು ಬದಲಾಯಿಸಿಕೊಂಡು 'ಜಮಾತ್ ಉದ್ ದಾವಾ' ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂಬೈ ದಾಳಿಯ ಆರೋಪ ಹೊತ್ತಿರುವ ಈ ಸಂಘಟನೆಯು ಪ್ರಸಕ್ತ ಭಾರತದ ಮೇಲೆ ದಾಳಿ ನಡೆಸಲು 'ಕರಾಚಿ ಪ್ರೊಜೆಕ್ಟ್' ಎಂಬ ಯೋಜನೆಯನ್ನು ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಉಗ್ರ ಸಯೀದ್ ಹೇಳಿದ್ದು....
ಸ್ವತಂತ್ರ ಕಾಶ್ಮೀರ ಹೋರಾಟಕ್ಕೆ ಎಲ್ಲಾ ಜಿಹಾದಿಗಳು ಬದ್ಧರಾಗಿದ್ದಾರೆ. ನೀವು ಸೋವಿಯತ್ ಒಕ್ಕೂಟದ ಸೋಲು ಮತ್ತು ಈಗ ಅಫಘಾನಿಸ್ತಾನದಲ್ಲಿ ಅಮೆರಿಕಾ ಬಳಲುತ್ತಿರುವುದನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಿ. ಕಾಶ್ಮೀರ ವಿಚಾರದಲ್ಲಿ ಭಾರತಕ್ಕೆ ಇದೇ ಉಪಚಾರ ಸಿಗಲಿದೆ.

ಭಾರತವು ಯಾವುದೇ ಕಾರಣಕ್ಕೂ ಕಾಶ್ಮೀರವನ್ನು ಬಿಟ್ಟು ಬಿಡುವುದಿಲ್ಲ ಎಂಬುವುದು ನನಗೆ ಮನದಟ್ಟಾಗಿದೆ. ಹಾಗಾಗಿ ನಮಗೆ ಉಳಿದಿರುವುದು ಜಿಹಾದ್ ಆಯ್ಕೆ ಮಾತ್ರ.

ಒಂದು ಮುಂಬೈ ದಾಳಿ ಎಲ್ಲೂ ಸಾಕಾಗಲ್ಲ. ಲಂಡನ್‌ನಲ್ಲಿ ನಡೆದ ಅಫಘಾನಿಸ್ತಾನ ಕುರಿತ ಅಮೆರಿಕಾ ಮತ್ತು ಅದರ ಮಿತ್ರಪಡೆಗಳ ಸಭೆಯು ಅವರ ಸೋಲನ್ನೇ ಬಿಂಬಿಸುತ್ತದೆ. ಇದೇ ಪರಿಸ್ಥಿತಿ ಭಾರತದ ಮಿಲಿಟರಿಗೂ ಒದಗಲಿದೆ.

ಭಾರತಕ್ಕೆ ಅಪಪ್ರಚಾರ ಮಾಡುವುದೇ ಕೆಲಸ. ಅಲ್ಲಿನ ಮಾಧ್ಯಮಗಳೂ ನನ್ನ ಬಗ್ಗೆ ಇಲ್ಲಸಲ್ಲದ ವರದಿಗಳನ್ನು ಪ್ರಕಟಿಸುತ್ತಿವೆ. ಆ ಮೂಲಕ ಅಂತಾರಾಷ್ಟ್ರೀಯ ಒತ್ತಡವನ್ನು ನಮ್ಮ ಮೇಲೆ ಹೇರುತ್ತಿವೆ. ನಾನು ಮುಂಬೈ ದಾಳಿಯಲ್ಲಿ ಪಾಲ್ಗೊಂಡಿಲ್ಲ. ಎಲ್ಲವೂ ಕಟ್ಟುಕಥೆ. ಇದಕ್ಕೆ ಯಾವುದೇ ಆಧಾರವಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ