ಇಸ್ಲಾಮಾಬಾದ್, ಮಂಗಳವಾರ, 23 ಫೆಬ್ರವರಿ 2010( 12:24 IST )
ಅಪಹರಿಸಲ್ಪಟ್ಟ ಸಿಖ್‌ರಿಬ್ಬರ ತಲೆ ಕಡಿದ ತಾಲಿಬಾನ್ ಉಗ್ರರ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿರುವ ಪಾಕಿಸ್ತಾನ, ದುಷ್ಕೃತ್ಯ ಎಸಗಿದ ಉಗ್ರರನ್ನು ಶಿಕ್ಷಿಸುವುದು ಖಚಿತ ಎಂದು ಹೇಳಿದೆ.
ಘಟನೆ ಕುರಿತು ತನಿಖೆಗೆ ಆದೇಶ ನೀಡಿದ್ದು, ಯಾವುದೇ ಕಾರಣಕ್ಕೂ ಇಂತಹ ಅಮಾನವೀಯ ಘಟನೆ ಮರುಕಳಿಸಲು ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಶಾಬಾಜ್ ಭಟ್ಟಿ ಸಿಎನ್‌ಎನ್-ಐಬಿಎನ್ ನಡೆಸಿದ ಸಂದರ್ಶನದಲ್ಲಿ ಭರವಸೆ ನೀಡಿದ್ದಾರೆ.
ಪಾಕಿಸ್ತಾನದ ತಾಲಿಬಾನ್ ಉಗ್ರರು ಅಪಹರಿಸಲ್ಪಟ್ಟ ನಾಲ್ವರ ಸಿಖ್‌ರಲ್ಲಿ ಇಬ್ಬರ ತಲೆ ಕಡಿದು ಪೇಶಾವರದ ಗುರುದ್ವಾರಕ್ಕೆ ಭಾನುವಾರ ರವಾನಿಸಿದ್ದರು. ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಲು ನಕಾರ ವ್ಯಕ್ತಪಡಿಸಿದ್ದಕ್ಕೆ ಮತ್ತು ನಿಗದಿತ ಗಡುವಿನೊಳಗೆ ಒತ್ತೆ ಹಣ ನೀಡಲು ನಿರಾಕರಿಸಿದ ನಿಟ್ಟಿನಲ್ಲಿ ಇಬ್ಬರ ಶಿರಚ್ಛೇದನ ಮಾಡಲಾಗಿತ್ತು. ಇನ್ನಿಬ್ಬರು ಸಿಖ್‌ರು ಉಗ್ರರ ವಶದಲ್ಲಿಯೇ ಇದ್ದಾರೆ.
ಸಿಖ್‌ರಿಬ್ಬರ ಶಿರಚ್ಛೇದನ ಮಾಡಿದ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಇದೊಂದು ಬೀಭತ್ಸ ಕೃತ್ಯ ಎಂದು ಕಿಡಿಕಾರಿದ್ದು, ಫೆ.25ರಂದು ಉಭಯ ದೇಶಗಳ ನಡೆಯುವ ವಿದೇಶಾಂಗ ಕಾರ್ಯದರ್ಶಿಗಳ ಸಭೆಯಲ್ಲಿ ಈ ಕುರಿತು ಚರ್ಚಿಸುವುದಾಗಿಯೂ ಭಾರತ ಹೇಳಿದೆ.