ವಾಷಿಂಗ್ಟನ್, ಮಂಗಳವಾರ, 23 ಫೆಬ್ರವರಿ 2010( 13:13 IST )
2001ರಲ್ಲಿ ಅಮೆರಿಕಾದ ಮೇಲೆ ಅಲ್‌ಖೈದಾ ದಾಳಿ ನಡೆಸಿದ ನಂತರ ಮಿಲಿಟರಿ ಸಹಕಾರ ಸೇರಿದಂತೆ ಪಾಕಿಸ್ತಾನಕ್ಕೆ ಅಮೆರಿಕಾವು ಸುಮಾರು 84,000 ಕೋಟಿ ರೂಪಾಯಿಗಳನ್ನು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆಂದು ನೀಡಿದೆ.
ಶ್ವೇತಭವನದ ದಾಖಲೆಗಳ ಪ್ರಕಾರ 2001ರ ಸೆಪ್ಟೆಂಬರ್ 11ರಂದು ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಅಲ್‌ಖೈದಾ ಭಯೋತ್ಪಾದನಾ ದಾಳಿ ನಡೆಸಿದ ನಂತರ ಪಾಕಿಸ್ತಾನದ ಜತೆ ಒಪ್ಪಂದ ಮಾಡಿಕೊಂಡಿರುವ ಅಮೆರಿಕಾ, ಇದುವರೆಗೆ ಮಿಲಿಟರಿ ಸಹಾಯವೆಂದು 11.5 ಬಿಲಿಯನ್ ಡಾಲರ್ ಹಣವನ್ನು ನೀಡಿದೆ.
ಮಿಲಿಟರಿ ಸಹಕಾರದ ಮೊತ್ತ ಸೇರಿದಂತೆ ಒಟ್ಟಾರೆ ಪಾಕಿಸ್ತಾನಕ್ಕೆ ನೀಡಲಾಗಿರುವ ಒಟ್ಟು ಮೊತ್ತ 18 ಬಿಲಿಯನ್ ಡಾಲರುಗಳು. ಅಂದರೆ ಭಾರತೀಯ ರೂಪಾಯಿಯ ಪ್ರಕಾರ ಸುಮಾರು 84,000 ಕೋಟಿ ರೂಪಾಯಿ. ಪಾಕಿಸ್ತಾನದ ರೂಪಾಯಿ ಪ್ರಕಾರ 1,60,000 ಕೋಟಿ ರೂಪಾಯಿಗಳು.
ನ್ಯೂಯಾರ್ಕ್ ಮೇಲೆ ಸೆಪ್ಟೆಂಬರ್ 11ರ ದಾಳಿ ನಂತರ ಅಮೆರಿಕಾವು ಪಾಕಿಸ್ತಾನಕ್ಕೆ ನೀಡಿದ ಶಾಸನೀಯ ಸಹಾಯದ ಪ್ರಕಾರ ಇಸ್ಲಾಮಾಬಾದ್ 6 ಬಿಲಿಯನ್ ಡಾಲರ್ ಮೊತ್ತವನ್ನು ನಾಗರಿಕ ಸಹಕಾರಕ್ಕೆಂದು ಪಡೆದುಕೊಂಡಿದೆ.
ಬರಾಕ್ ಒಬಾಮಾ ಆಡಳಿತವು ತನ್ನ ಇತ್ತೀಚಿನ ವಾರ್ಷಿಕ ಆಯವ್ಯಯ ಪಟ್ಟಿಯಲ್ಲಿ ಪಾಕಿಸ್ತಾನಕ್ಕೆ ಮಿಲಿಟರಿ ಸಹಕಾರಕ್ಕೆಂದು 1.6 ಬಿಲಿಯನ್ ಡಾಲರ್ ಹಾಗೂ ನಾಗರಿಕ ಅಭಿವೃದ್ಧಿಗಾಗಿ 1.4 ಬಿಲಿಯನ್ ಡಾಲರ್ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿದೆ.
ಒಬಾಮಾ ಆಡಳಿತದ ಪ್ರಸ್ತಾವನೆಯೂ ಸೇರಿದಲ್ಲಿ ಅಮೆರಿಕಾವು 2001ರ ನಂತರ ಪಾಕಿಸ್ತಾನಕ್ಕೆ ನೀಡಿದ ಒಟ್ಟು ಹಣಕಾಸು ಸಹಕಾರದ ಮೊತ್ತ 20.7 ಬಿಲಿಯನ್ ಡಾಲರುಗಳನ್ನು ದಾಟಲಿದೆ ಎಂದು ರಕ್ಷಣಾ ಇಲಾಖೆ, ಸ್ಟೇಟ್ ಮತ್ತು ಕೃಷಿ ಇಲಾಖೆ ಹಾಗೂ ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕಾ ಏಜೆನ್ಸಿ ತನ್ನ ಸಂಯೋಜಿತ ವರದಿಯಲ್ಲಿ ತಿಳಿಸಿದೆ.