ಉಭಯ ದೇಶಗಳ ನಡುವೆ ನಡೆಯಲಿರುವ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಸಂದರ್ಭದಲ್ಲಿ ಕಾಶ್ಮೀರ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆಯೂ ಮಾತುಕತೆ ನಡೆಯಬೇಕು. ಆ ನಿಟ್ಟಿನಲ್ಲಿ ಭಾರತ ಕೇವಲ ಸಂಕುಚಿತ ಅಜೆಂಡಾದೊಂದಿಗೆ ಭಯೋತ್ಪಾದನೆ ಕುರಿತಂತೆ ಚರ್ಚೆಗೆ ಸೀಮಿತಗೊಳಿಸುವುದು ಬೇಡ ಎಂದು ಪಾಕಿಸ್ತಾನ ಸ್ಪಷ್ಟ ಸಂದೇಶ ನೀಡಿದೆ.
ಐದು ದಿನಗಳ ಕಾಲದ ಅಧಿಕೃತ ಭೇಟಿಗಾಗಿ ಚೀನಾಕ್ಕೆ ಆಗಮಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಉಭಯ ದೇಶಗಳ ನಡುವೆ ಎಲ್ಲಾ ವಿವಾದಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಯುವ ಮೂಲಕ ಮುಂದಿನ ದಿನಗಳಲ್ಲಿ ಎರಡೂ ದೇಶಗಳ ಬಾಂಧವ್ಯ ವೃದ್ಧಿಸಬೇಕಾಗಿದೆ ಎಂದರು.
ಆ ನಿಟ್ಟಿನಲ್ಲಿ ಇಂಡೋ-ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ಭಾರತ ಮತ್ತು ಪಾಕ್ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುವ ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದರು. ನೆನೆಗುದಿಗೆ ಬಿದ್ದಿರುವ ಜಮ್ಮು-ಕಾಶ್ಮೀರ ಸೇರಿದಂತೆ ಎಲ್ಲಾ ವಿವಾದಗಳೂ ಸೌಹಾರ್ದಯುತವಾಗಿ ಬಗೆಹರಿಯುವುದನ್ನೇ ಪಾಕ್ ಎದುರು ನೋಡುತ್ತಿರುವುದಾಗಿ ಖುರೇಷಿ ತಿಳಿಸಿದರು.