ವೈದ್ಯೋ ನಾರಾಯಣೋ ಹರಿ ಎಂಬುದಕ್ಕೆ ಅಪವಾದವೆನಿಸುವ ಮತ್ತೊಬ್ಬ ವಿಕೃತಕಾಮಿ ಅಮೆರಿಕನ್ ವೈದ್ಯ ಸಿಕ್ಕಿ ಬಿದ್ದಿದ್ದಾನೆ. ಮಕ್ಕಳ ತಜ್ಞನಾಗಿರುವ ಈತ 103 ಅಪ್ರಾಪ್ತರ ಮೇಲೆ ಅತ್ಯಾಚಾರ ಸೇರಿದಂತೆ 471 ಲೈಂಗಿಕ ಕಿರುಕುಳ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.
ಎರಡು ವರ್ಷದ ಪುಟ್ಟ ಬಾಲಕಿಯೊಬ್ಬಳು ವೈದ್ಯನ ವರ್ತನೆಯ ಬಗ್ಗೆ ತನ್ನ ತಾಯಿಯಲ್ಲಿ ದೂರಿಕೊಂಡಿದ್ದಳು. ವೈದ್ಯ ನನ್ನನ್ನು ಪರೀಕ್ಷೆಯ ನಂತರ ಕೆಳಗಿನ ಕೊಠಡಿಗೆ ಕರೆದುಕೊಂಡು ಹೋಗಿ ನನಗೆ ನೋವು ಮಾಡಿದ್ದಾನೆ ಎಂಬ ಬಾಲಕಿಯ ದೂರು ಮತ್ತು ಇತರ ರೋಗಿಗಳ ದೂರುಗಳನ್ನಾಧರಿಸಿ ವೈದ್ಯನನ್ನು ಬಂಧಿಸಿದ ನಂತರ ಆತನ ಕರ್ಮಕಾಂಡಗಳು ಒಂದೊಂದಾಗಿಯೇ ಬಯಲಾಗತೊಡಗಿದ್ದವು.
ನ್ಯೂಯಾರ್ಕ್ ಸಮೀಪದಲ್ಲಿರುವ ಪುಟ್ಟ ರಾಜ್ಯ ಡೆಲಾವೆರ್ ರಾಜಧಾನಿ ಡೋವರ್ ಎಂಬ ನಗರದಲ್ಲಿನ ನ್ಯಾಯಾಲಯವೊಂದು ಸೋಮವಾರ ಈತನ ವಿರುದ್ಧ ಆರೋಪಪಟ್ಟಿ ದಾಖಲಿಸಿದೆ. ಇಲ್ಲಿನ ಮುಖ್ಯ ನ್ಯಾಯಾಧೀಶರು ಆರೋಪಿ ಲೇವಿಸ್ನ 56ರ ಹರೆಯದ ಡಾ. ಅರ್ಲ್ ಬ್ರಾಡ್ಲಿಯ ಮೇಲೆ ಇಷ್ಟೂ ಪ್ರಕರಣಗಳನ್ನು ದಾಖಲಿಸುವಂತೆ ಆದೇಶ ನೀಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಬ್ರಾಡ್ಲಿ ತನ್ನಲ್ಲಿಗೆ ಬರುವ ರೋಗಿಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಾ ಬಂದಿದ್ದಾನೆ. ಒಂದು ಹುಡುಗಿಯನ್ನು ಒಂದು ವರ್ಷದ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಅತ್ಯಾಚಾರ ನಡೆಸಿದ ವೀಡಿಯೋ ಟೇಪುಗಳು ಲಭ್ಯವಾಗಿವೆ.
1998ರಿಂದ ಇದುವರೆಗೆ ಆತ ನಡೆಸಿರುವ ಕೃತ್ಯಗಳನ್ನು ರೆಕಾರ್ಡ್ ಮಾಡಿಕೊಂಡಿದ್ದು, ಕೆಲವು ವೀಡಿಯೋಗಳನ್ನು ಬ್ರಾಡ್ಲಿ ಮತ್ತು ಕಚೇರಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಓರ್ವ ಬಾಲಕ ಸೇರಿದಂತೆ ಹಲವರ ಮೇಲೆ ಅತ್ಯಾಚಾರ ನಡೆಸುವ ಸುಮಾರು 13 ಗಂಟೆಗಳ ವೀಡಿಯೋ ಚಿತ್ರಣಗಳಿವೆ ಎಂದು ಅಟಾರ್ನಿ ಜನರಲ್ ಬ್ಯೂ ಬಿಡೆನ್ ತಿಳಿಸಿದ್ದಾರೆ.
ಡೆಲಾವೆರ್ ರಾಜ್ಯದ ಇತಿಹಾಸದಲ್ಲೇ ಇಂತಹದ್ದೊಂದು ಪ್ರಕರಣ ನಡೆದಿರುವುದು ನನಗೆ ಗೊತ್ತಿಲ್ಲ. ನಮ್ಮ ನಡುವೆ ದನಿಯೆತ್ತಲಾರದವರ ವಿರುದ್ಧ ಆತ ಇಂತಹ ಕ್ಷುಲ್ಲಕ ಕೃತ್ಯಗಳನ್ನು ಎಸಗಿದ್ದಾನೆ ಎಂದು ಗದ್ಗದಿತರಾಗಿ ನುಡಿದರು.
ಅತ್ಯಾಚಾರ, ಮಕ್ಕಳ ಲೈಂಗಿಕ ಶೋಷಣೆ, ಕಾನೂನು ಬಾಹಿರ ಲೈಂಗಿಕ ಸಂಪರ್ಕ, ಮಕ್ಕಳ ಮೇಲೆ ನಿರಂತರ ಲೈಂಗಿಕ ಕಿರುಕುಳ, ದೌರ್ಜನ್ಯ ಮತ್ತು ಅಜಾಗರೂಕತೆಯಿಂದ ಅಪಾಯಕ್ಕೆ ತಳ್ಳುವುದು ಮುಂತಾದ ಆರೋಪಗಳನ್ನು ಬ್ರಾಡ್ಲಿ ಮೇಲೆ ಹೊರಿಸಲಾಗಿದೆ.
ಡಿಸೆಂಬರ್ನಲ್ಲಿ ಬಂಧನಕ್ಕೊಳಗಾಗಿದ್ದ ಈ ಶಿಶುತಜ್ಞ ಒಂಬತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 29 ಹೇಯ ಪ್ರಕರಣಗಳನ್ನು ದಾಖಲಿಸಿದ ನಂತರ 2.9 ಮಿಲಿಯನ್ ಡಾಲರ್ ಆಧಾರದ ಮೇಲೆ ಜಾಮೀನು ನೀಡಲಾಗಿದ್ದು, ಕಳೆದ ವಾರ ಆತನ ವೈದ್ಯಕೀಯ ಪರವಾನಗಿಯನ್ನು ಕೂಡ ರಾಜ್ಯ ಸರಕಾರ ರದ್ದುಗೊಳಿಸಿದೆ.