ಇಲ್ಲಿನ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ಉಗ್ರರಿಂದ ಅಪಹರಿಸಲ್ಪಟ್ಟ ಸಿಖ್‌ರಿಬ್ಬರ ಶಿರಚ್ಛೇದನ ಮಾಡಿದ ಬೀಭತ್ಸ ಘಟನೆ ಬೆನ್ನಲ್ಲೇ, ಇದೀಗ ಪಾಕಿಸ್ತಾನದ ಹಿಂದುಯೊಬ್ಬರನ್ನು ಅಪಹರಿಸಿದ್ದು, ಆತನ ಬಿಡುಗಡೆಗಾಗಿ 10ಮಿಲಿಯನ್ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಕಂಪ್ಯೂಟರ್ ಇಂಜಿನಿಯರ್ ಆಗಿರುವ ರೋಬಿನ್ ಸಿಂಗ್ ಎಂಬುವರನ್ನು ಕಳೆದ ಶುಕ್ರವಾರ ಯೂನಿರ್ವಸಿಟಿ ರಸ್ತೆಯ ಮಾರ್ಕೆಟ್ ಪ್ರದೇಶದಿಂದ ಅಪರಿಚಿತ ವ್ಯಕ್ತಿಗಳು ಅಪಹರಿಸಿರುವುದಾಗಿ ಸ್ಥಳೀಯ ರಾಜಕಾರಣಿಯೊಬ್ಬರು ಮಂಗಳವಾರ ವಿವರಿಸಿದ್ದಾರೆ. ಕೆಲವು ಕಾರ್ಯ ನಿಮಿತ್ತ ಸಿಂಗ್ ನೌಶೇರಾಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಹರಣ ನಡೆದಿದೆ ಎಂದು ಹೇಳಿದ್ದಾರೆ.
ರೋಬಿನ್ ಸಿಂಗ್ ಬಿಡುಗಡೆಗಾಗಿ ಹತ್ತು ಮಿಲಿಯನ್ ಹಣವನ್ನು ನೀಡಬೇಕೆಂದು ಅಪಹರಣಕಾರರು ಸಿಂಗ್ ಸಂಬಂಧಿಗಳಲ್ಲಿ ಬೇಡಿಕೆ ಇಟ್ಟಿರುವುದಾಗಿ ಪೇಶಾವರದ ಡಿಸ್ಟ್ರಿಕ್ಟ್ ಅಸೆಂಬ್ಲಿ ಸದಸ್ಯ ಶಾಹಿಬ್ ಸಿಂಗ್ ತಿಳಿಸಿದ್ದಾರೆ.
ರೋಬಿನ್ ಸಿಂಗ್ ಅವರನ್ನು ಅಪಹರಿಸಿರುವುದಾಗಿ ಸಹೋದರ ರಾಜನ್ ಸಿಂಗ್ ಪಶ್ಚಿಮ ಕಂಟ್ಮೋನ್‌ಮೆಂಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುವುದಾಗಿ ಶಾಹಿಬ್ ಹೇಳಿದ್ದಾರೆ. ಆದರೆ ಅಪಹರಣ ಕುರಿತಂತೆ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ಠಾಣಾಧಿಕಾರಿಗಳು ತಿಳಿಸಿದ್ದು, ರೋಬಿನ್ ಅಪಹರಣಗೊಂಡ ಪ್ರದೇಶ ತಮ್ಮ ಠಾಣಾ ವ್ಯಾಪ್ತಿಗೆ ಸೇರಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿಂಗ್ ಅಪಹರಣವನ್ನು ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ತೀವ್ರವಾಗಿ ಖಂಡಿಸಿದ್ದು, ರೋಬಿನ್ ಸಿಂಗ್ ಅವರನ್ನು ಅಪಹರಣಕಾರರಿಂದ ಸುರಕ್ಷಿತವಾಗಿ ಕರೆತರುವಂತೆ ಜರ್ದಾರಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.