ರಿಯೋ ಡೇ ಜನೆರಿಯೋ, ಗುರುವಾರ, 25 ಫೆಬ್ರವರಿ 2010( 15:02 IST )
ಯಾವುದೇ ವಿಷಯದ ಕುರಿತು ವಿಶ್ವದ ದೊಡ್ಡಣ್ಣನ ಜೊತೆ ಮಾತುಕತೆ ನಡೆಸಲು ಕ್ಯೂಬಾ ಸರ್ಕಾರ ಸಿದ್ದವಿರುವುದಾಗಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಖಚಿತಪಡಿಸಿದ್ದು, ಆದರೆ ಸಮಾನವಾದ ಷರತ್ತಿನ ಆಧಾರದ ಮೇಲೆ ಮಾತ್ರ ಚರ್ಚೆಗೆ ಸಿದ್ದ ಎಂದು ಹೇಳಿರುವುದಾಗಿ ಬ್ರೆಜಿಲ್‌ನ ನ್ಯೂಸ್ ಏಜೆನ್ಸಿ ವರದಿ ತಿಳಿಸಿದೆ.
ಅಮೆರಿಕದ ಜೊತೆ ನಾವು ಎಲ್ಲಾ ವಿಷಯಗಳ ಕುರಿತು ಮಾತುಕತೆ ನಡೆಸಲು ಉತ್ಸುಕರಾಗಿದ್ದೇವೆ. ಮತ್ತೊಮ್ಮೆ ನಾನು 3ಬಾರಿ ಪುನರಚ್ಚರಿಸುತ್ತೇನೆ, ಎಲ್ಲಾ,ಎಲ್ಲಾ, ಎಲ್ಲಾ ವಿಷಯಗಳ ಕುರಿತಾಗಿ ಎಂದು ಕ್ಯಾಸ್ಟ್ರೋ ಬುಧವಾರ ಹೇಳಿದ್ದಾರೆ.
ಅಮೆರಿಕ ಕೇವಲ ನಮ್ಮನ್ನು ಮಾತ್ರ ಷರತ್ತಿಗೆ ಒಳಪಡಿಸಿ ಮಾತುಕತೆ ನಡೆಸುವುದು ಬೇಕಾಗಿಲ್ಲ. ಸಮಾನ ಷರತ್ತಿನ ಮೂಲಕ ಎಲ್ಲಾ ವಿಷಯಗಳ ಕುರಿತು ಅಮೆರಿಕದ ಜೊತೆ ಚರ್ಚೆ ನಡೆಸಲು ಸಿದ್ದ ಅವರು ತಿಳಿಸಿದರು.
ಕ್ಯೂಬಾ ದ್ವೀಪರಾಷ್ಟ್ರದ ಸ್ವಾತಂತ್ರ್ಯ ಅಭಿವ್ಯಕ್ತಪಡಿಸಲು ಅಡ್ಡಿಯಾಗುವಂತಹ ಮಾತುಕತೆ ನಮಗೆ ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು. ಅಮೆರಿಕ ತಮ್ಮ ಜೊತೆ ಮಾತುಕತೆ ಬಯಸುವುದಾದರೆ ನಾವು ಸಿದ್ದರಿದ್ದೇವೆ ಎಂದರು.