ಹಮಾಸ್ ಕಮಾಂಡರ್ ಹತ್ಯೆ: ಇಸ್ರೇಲ್‌ಗೆ ಆಸ್ಟ್ರೇಲಿಯಾ ಎಚ್ಚರಿಕೆ
ಸಿಡ್ನಿ, ಗುರುವಾರ, 25 ಫೆಬ್ರವರಿ 2010( 16:16 IST )
ದುಬೈಯಲ್ಲಿ ಹಮಾಸ್ ಕಮಾಂಡರ್ ಹತ್ಯೆಗೆ 'ಮೊಸಾದ್' ಹಂತಕರು ಆಸ್ಟ್ರೇಲಿಯಾದ ಮೂರು ಪಾಸ್‌ಪೋರ್ಟ್‌ಗಳನ್ನು ಬಳಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ, ಇಸ್ರೇಲ್ ರಾಯಭಾರಿಯನ್ನು ಕರೆಸಿ ಕಠಿಣ ಎಚ್ಚರಿಕೆ ರವಾನಿಸಿದೆ.
ಹಮಾಸ್ ನಾಯಕ ಮಹ್ಮೂದ್ ಅಲ್ ಮಬೂ ಅವರನ್ನು ದುಬೈನ ಹೊಟೇಲೊಂದರಲ್ಲಿ ಹತ್ಯೆಗೈದ ಆರೋಪಿಗಳೆಂದು ಹೇಳಲಾಗಿರುವ 15 ಮಂದಿಯ ಪೈಕಿ ಮೂವರು ಆರೋಪಿಗಳು ಆಸ್ಟ್ರೇಲಿಯಾ ಪಾಸ್‌ಪೋರ್ಟ್ ಹೊಂದಿರುವುದು ಬೆಳಕಿಗೆ ಬಂದಿತ್ತು. ಇಬ್ಬರು ಪುರುಷರು ಮತ್ತು ಮಹಿಳೆಯೊಬ್ಬಳು ಆಸ್ಟ್ರೇಲಿಯಾದ ನಕಲಿ ಪಾಸ್‌ಪೋರ್ಟ್ ಹೊಂದಿದ್ದರು.
ಇದನ್ನು ಖಂಡಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಕೆವಿನ್ ರೂಡ್, ಇಂತಹ ಗಂಭೀರ ವಿಚಾರಗಳ ಕುರಿತು ನಾವು ಸುಮ್ಮನಿರಲಾರೆವು ಎಂದು ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ.
ಒಬ್ಬರನ್ನು ಕೊಲ್ಲಬೇಕೆಂಬ ಉದ್ದೇಶದಿಂದ ನಮ್ಮ ದೇಶದ ಪಾಸ್‌ಪೋರ್ಟನ್ನು ಬಳಸುವುದು ಅಥವಾ ನಕಲು ಮಾಡುವುದು ಯಾವ ದೇಶದಿಂದ ನಡೆದರೂ ಅದು ನಮಗೆ ತೀವ್ರ ಕಳವಳಕಾರಿ ವಿಚಾರ ಮತ್ತು ಇದನ್ನು ಕೇಳಿಯೂ ನಾವು ಸುಮ್ಮನಿರಲಾರೆವು ಎಂದು ರೂಡ್ ತಿಳಿಸಿದ್ದಾರೆ.
ದುಬೈ ಪೊಲೀಸಲು ಆಸ್ಟ್ರೇಲಿಯಾ, ಬ್ರಿಟನ್, ಫ್ರಾನ್ಸ್ ಮತ್ತು ಐರ್ಲೆಂಡ್ ಪಾಸ್‌ಪೋರ್ಟ್ ಹೊಂದಿದ ಶಂಕಿತರ ವಿವರ ಬಿಡುಗಡೆ ಮಾಡಿದ ನಂತರ ಆಸ್ಟ್ರೇಲಿಯಾದ ಅಧಿಕಾರಿಗಳು ಈ ಕುರಿತು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಜನವರಿ 20ರಂದು ದುಬೈನ ಐಷಾರಾಮಿ ಹೊಟೇಲೊಂದರಲ್ಲಿ ಯೋಜನಾಬದ್ಧವಾಗಿ ನಡೆದಿದ್ದ ಈ ಹತ್ಯೆ ನಡೆಸಿರುವುದು ಇಸ್ರೇಲ್‌ನ ಬೇಹುಗಾರಿಕಾ ದಳ 'ಮೊಸಾದ್' ಎಂದು ದುಬೈ ಪೊಲೀಸರು ಆರೋಪಿಸಿದ್ದಾರೆ.