ಕಳೆದ ವರ್ಷ ಶ್ರೀಲಂಕಾದ ತಮಿಳು ಹುಲಿಗಳ ಸೋಲಿನ ನಂತರ ಮುನಿಸಿಕೊಂಡಿರುವ ಕೆನಡಾದಲ್ಲಿರುವ ಬೃಹತ್ ಪ್ರಮಾಣದ ತಮಿಳರು ಮತ್ತೆ ಹಿಂಸಾಚಾರ ಆರಂಭಿಸುವ ಸಾಧ್ಯತೆಗಳಿವೆ ಎಂದು ವರದಿಯೊಂದು ಹೇಳಿದೆ.
ಸ್ವರ್ಣಮಂದಿರದಲ್ಲಿ ಅಡಗಿದ್ದ ಭಯೋತ್ಪಾದಕರನ್ನು ಹೊರಗೆಳೆಯಲು ಭಾರತದ ಸೇನೆಯು ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ 1985ರಲ್ಲಿ ಖಾಲಿಸ್ತಾನ ಹೋರಾಟಗಾರರು ಏರ್ ಇಂಡಿಯಾ ಕಾನಿಷ್ಕಾಕ್ಕೆ ಬಾಂಬ್ ಇಟ್ಟು ಸ್ಫೋಟಿಸಿದಂತಹ ಬೃಹತ್ ಹತ್ಯಾಕಾಂಡವನ್ನು ತಮಿಳರು ಕೂಡ ನಡೆಸಲು ಮುಂದಾಗುವ ಸಾಧ್ಯತೆಗಳಿವೆ ಎಂದು ಕೆನಡಾದ ಭದ್ರತಾ ದಳಗಳು ಆತಂಕ ವ್ಯಕ್ತಪಡಿಸಿವೆ.
ಬ್ರೂಸೆಲ್ಸ್ ಮೂಲದ 'ಇಂಟರ್‌ನ್ಯಾಷನಲ್ ಕ್ರೈಸಿಸ್ ಗ್ರೂಪ್' ಬಿಡುಗಡೆ ಮಾಡಿರುವ 'ಎಲ್‌ಟಿಟಿಇ ಬಳಿಕ ಶ್ರೀಲಂಕಾ ಸಮುದಾಯ' ಎಂದು ಶೀರ್ಷಿಕೆ ನೀಡಲಾಗಿರುವ ವರದಿಯಲ್ಲಿ ಇದನ್ನು ವಿವರಿಸಲಾಗಿದೆ.
ಶ್ರೀಲಂಕಾ ಸೇನೆಯೆದುರು ಅವಮಾನಕಾರಿಯಾಗಿ ಸೋಲುಣ್ಣುವ ಮೊದಲು ಯುದ್ಧದ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಎಲ್‌ಟಿಟಿಇ ಯೋಧರು ಸಾವನ್ನಪ್ಪುತ್ತಿದ್ದಾಗ ಕೆನಡಾದ ಮೂರು ಲಕ್ಷಕ್ಕೂ ಹೆಚ್ಚು ತಮಿಳರು ತಾವು ಬಲಹೀನರು, ಪಾಶ್ಚಿಮಾತ್ಯರಿಂದ ದ್ರೋಹಕ್ಕೊಳಗಾದೆವು ಎಂದು ಭಾವಿಸಿದ್ದರು. ಈ ಸಂದರ್ಭದಲ್ಲಿ ಅವರು ನ್ಯಾಯ ಬಯಸಿದ್ದರಲ್ಲದೆ, ಪ್ರತೀಕಾರದ ಯೋಚನೆಯನ್ನೂ ಮಾಡಿದ್ದರು ಎಂದು ಈ ವರದಿ ವಿವರಣೆ ನೀಡಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ ತಮಿಳು ಹುಲಿಗಳು ಶ್ರೀಲಂಕಾದೆದುರು ಶರಣಾಗಿರುವ ಹೊರತಾಗಿಯೂ ವರದಿಯ ಪ್ರಕಾರ ವಿದೇಶಗಳಲ್ಲಿನ ತಮಿಳರು ಪ್ರತ್ಯೇಕ 'ತಮಿಳು ಈಳಂ'ಗೆ ಸಂಪೂರ್ಣ ಬದ್ಧರಾಗಿದ್ದಾರೆ.
ನಮ್ಮ ತಮಿಳು ಸಮುದಾಯದಲ್ಲಿ ಏನು ನಡೆಯುತ್ತಿದೆ, ಅದರಲ್ಲೂ ತಮಿಳು ಹುಲಿಗಳಿಗಾಗಿ ಹಣ ಸಂಗ್ರಹಿಸಲಾಗುತ್ತಿದೆ, ಇದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಈ ಹಿಂದೆ ಖಾಲಿಸ್ತಾನ ಹೋರಾಟದ ಸಂದರ್ಭದಲ್ಲಿ ಇಲ್ಲಿದ್ದ ಸಿಖ್ ಮೂಲದವರ ಬೆಂಬಲದಿಂದ ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸಿ 329 ಮಂದಿಯನ್ನು ಕೊಲ್ಲಲಾಗಿತ್ತು. ಅಂತಹ ಮತ್ತೊಂದು ಘಟನೆಯನ್ನು ನೋಡಲು ನಾವು ಬಯಸುವುದಿಲ್ಲ ಎಂದು ಕೆನಡಾದ ಭದ್ರತಾ ಅಧಿಕಾರಿಯೊಬ್ಬರು ಹೇಳಿರುವುದನ್ನೂ ಈ ವರದಿ ಉಲ್ಲೇಖಿಸಿದೆ.