ಪಾಕಿಸ್ತಾನಕ್ಕೆ 3.2 ಡಾಲರ್; ಬಿಡುಗಡೆಗೆ ಹಿಲರಿ ಕ್ಲಿಂಟನ್ ಮನವಿ
ವಾಷಿಂಗ್ಟನ್, ಗುರುವಾರ, 25 ಫೆಬ್ರವರಿ 2010( 17:42 IST )
ಅಫಘಾನಿಸ್ತಾನ ಮತ್ತು ಇರಾಕ್‌ಗಳೊಂದಿಗೆ ಪಾಕಿಸ್ತಾನಕ್ಕೆ ಮುಂಚೂಣಿ ಸ್ಥಾನವನ್ನು ನೀಡಿರುವ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಆ ದೇಶಕ್ಕೆ ಒಬಾಮಾ ಆಡಳಿತ ನೀಡಲು ಉದ್ದೇಶಿಸಿರುವ 3.2 ಬಿಲಿಯನ್ ಡಾಲರ್ ನಾಗರಿಕ ಮತ್ತು ಮಿಲಿಟರಿ ಸಹಕಾರಕ್ಕೆ ಒಪ್ಪಿಗೆ ಸೂಚಿಸುವಂತೆ ಶಾಸಕಾಂಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
2011ರ ಆರ್ಥಿಕ ವರ್ಷದಲ್ಲಿ ಪಾಕಿಸ್ತಾನಕ್ಕೆ ನೀಡಲುದ್ದೇಶಿಸಿರುವ ಪ್ರಸ್ತಾಪವನ್ನು ಶಾಸಕಾಂಗಕ್ಕೆ ಕಳುಹಿಸಿಕೊಟ್ಟಿರುವ ಹಿಲರಿ, ಇದಕ್ಕೆ ಅಂಗೀಕಾರ ನೀಡುವಂತೆ ಹೇಳಿದ್ದಾರೆ ಎಂದು ವರದಿಗಳು ಹೇಳಿವೆ.
ತೀವ್ರವಾದವನ್ನು ಮಣಿಸುವುದು, ಆರ್ಥಿಕ ಅಭಿವೃದ್ಧಿಗೆ ಒತ್ತು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವುದು ಮತ್ತು ಪಾಕಿಸ್ತಾನದ ಜನತೆಯೊಂದಿಗೆ ದೂರಗಾಮಿ ಸಂಬಂಧವನ್ನು ರೂಪಿಸುವುದಕ್ಕಾಗಿ 3.2 ಬಿಲಿಯನ್ ಡಾಲರ್ ಹಣ ಬಿಡುಗಡೆಗೆ ಅಂಗೀಕಾರ ನೀಡುವಂತೆ ನಾವು ಮನವಿ ಮಾಡಿದ್ದೇವೆ ಎಂದು ಕ್ಲಿಂಟನ್ ಸಂಸದೀಯ ಸಮಿತಿಯೆದುರು ತಿಳಿಸಿದ್ದಾರೆ.
ಪಾಕ್ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿಯವರ ನೇತೃತ್ವದ ಸರಕಾರ ಇತ್ತೀಚೆಗೆ ತೆಗೆದುಕೊಂಡಿರುವ ಕ್ರಮಗಳನ್ನು ಪ್ರಶಂಸಿಸಿರುವ ಅವರು, ಒಬಾಮಾ ಆಡಳಿತವು ಅಲ್ಲಿನ ಬೃಹತ್ ಯೋಜನೆಗಳಿಗೆ ಸಹಕಾರ ನೀಡಲು ಬದ್ಧವಾಗಿದೆ ಎಂದರು.
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಅಮೆರಿಕಾದೊಂದಿಗೆ ಕೈ ಜೋಡಿಸಿರುವ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಇರಾಕ್ ದೇಶಗಳಿಗೆ ಒಬಾಮಾ ಆಡಳಿತವು ಆರ್ಥಿಕ ಸಹಕಾರ ಮುಂದುವರಿಸಲಿದೆ. ಇದರ ಜತೆಗೆ ಮಿಲಿಟರಿ ಸಹಕಾರವನ್ನೂ ನೀಡಲಾಗುತ್ತಿದೆ.