ಹೊಸ ಸಂವಿಧಾನದ ರಚನೆಯೊಂದಿಗೆ ಅಧಿಕಾರದ ಗದ್ದುಗೆ ಏರಿ ನೂರು ದಿನ ಕಳೆಯುವ ಮುನ್ನವೇ ನೇಪಾಳದ ಸರ್ಕಾರ ಭಾರೀ ಮೊತ್ತದ ಭ್ರಷ್ಟಚಾರ ಮಾಡಿರುವ ಆರೋಪದ ಮೇಲೆ ಶಿಕ್ಷಣ ಮತ್ತು ಕ್ರೀಡಾ ಸಚಿವರೊಬ್ಬರನ್ನು ವಜಾಗೊಳಿಸಲಾಗಿದೆ.
ಶಿಕ್ಷಣಕ್ಕಾಗಿ ದಾನಿಗಳಿಂದ, ವಿಶ್ವ ಬ್ಯಾಂಕ್ ಹಾಗೂ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ಗಳಿಂದ ಬಂದಿದ್ದ ಭಾರೀ ಮೊತ್ತದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದ ಮೇಲೆ ಶಿಕ್ಷಣ ಸಚಿವ ಹುದ್ದೆ ಕಳೆದುಕೊಳ್ಳವಂತಾಗಿದೆ.
ನೇಪಾಳ ಮೈತ್ರಿ ಸರ್ಕಾರದಲ್ಲಿ ನಾಲ್ಕನೆ ದೊಡ್ಡ ಪಕ್ಷವಾಗಿರುವ ತೆರೈ ಮಾಧೇಶ್ ಲೋಕತಾಂತ್ರಿಕ್ ಪಕ್ಷದ ರಾಮ್ ಚಂದ್ರಾ ಕುಶ್ವಾ ಇದೀಗ ಭ್ರಷ್ಟಚಾರದ ಆರೋಪ ಹೊತ್ತು ಸಚಿವಗಿರಿಯಿಂದ ವಜಾಗೊಂಡಿದ್ದಾರೆ. ಅಲ್ಲದೇ, ಶಿಕ್ಷಣ ಸಚಿವನನ್ನು ವಜಾಗೊಳಿಸಿದ ದಿನದಂದೇ, ಅದೇ ಪಕ್ಷದ ಸರಬೇಂದ್ರಾ ನಾಥ್ ಶುಕ್ರಾ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಕ ಮಾಡಲಾಗಿದೆ.
ಶಿಕ್ಷಣ ಮೀಸಲಾತಿ ನೀತಿಯಡಿಯಲ್ಲಿ ಸಾವಿರಾರು ಮಂದಿಯಿಂದ ಹಣವನ್ನು ಪಡೆದು ಶಿಕ್ಷಕ ಕೆಲಸವನ್ನು ಕೊಡಿಸುವುದಾಗಿ ಕುಶ್ವಾ ಭಾರೀ ಭ್ರಷ್ಟಾಚಾರ ಎಸಗಿರುವ ಆರೋಪದಲ್ಲಿ ವಜಾಗೊಳಿಸಲಾಗಿದೆ. ಆದರೆ ಸರ್ಕಾರ ತನ್ನನ್ನು ವಜಾಗೊಳಿಸಿದೆ ಎಂಬ ವಿಷಯ ಕುಶ್ವಾಗೆ ಮಾಹಿತಿ ದೊರೆತಿಲ್ಲವಂತೆ!
ಆದರೆ ಕುಶ್ವಾ ಅವರು ಮಾಧೇಶಿ ಆಗಿದ್ದರಿಂದಲೇ ಅವರನ್ನು ಸಚಿವಗಿರಿಯಿಂದ ವಜಾಗೊಳಿಸಲಾಗಿದೆ ಎಂದು ಸಚಿವರ ಬೆಂಬಲಿಗರು ಗಂಭೀರವಾಗಿ ಆರೋಪಿಸಿದ್ದಾರೆ. ಈಗಾಗಲೇ ಹಲವಾರು ಸಚಿವರ ವಿರುದ್ಧ ಸಾಕಷ್ಟು ಭ್ರಷ್ಟಾಚಾರದ ಆರೋಪ ಇದ್ದರೂ ಕೂಡ ಸರ್ಕಾರ ಅವರೆನ್ನೆಲ್ಲಾ ಬಿಟ್ಟು, ಕೇವಲ ಕುಶ್ವಾ ವಿರುದ್ಧ ಮಾತ್ರ ಕ್ರಮಕೈಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.