ಮುಂಬೈ ಉಗ್ರರ ದಾಳಿಯಯಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ ಇಬ್ಬರು ಪಾಕಿಸ್ತಾನದ ಸೇನಾಧಿಕಾರಿಗಳನ್ನು, ತಮ್ಮ ವಶಕ್ಕೆ ನೀಡುವಂತೆ ಭಾರತ ಕೋರಿದೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ದೆಹಲಿಯಲ್ಲಿ ನಡೆದ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯಲ್ಲಿ, ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್, ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಷೀರ್ ಅವರಿಗೆ ಪಾಕ್ ಸೇನಾಧಿಕಾರಿಗಳು ಸಂಚಿನಲ್ಲಿ ಭಾಗಿಯಾಗಿರುವ ಬಗ್ಗೆ ನೂತನ ದಸ್ತಾವೇಜುಗಳನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆಯ ಮೇಜರ್ ಇಕ್ಬಾಲ್ ಮತ್ತು ಮೇಜರ್ ಸಮೀರ್ ಅಲಿ ಮುಂಬೈ ಉಗ್ರರ ದಾಳಿಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.
ಭಾರತದ ಅಧಿಕಾರಿಗಳು ಹೆಸರಿಸಿದ ಮೇಜರ್ ಇಕ್ಬಾಲ್ ಸೇನೆಯ ಹುದ್ದೆಯಲ್ಲಿ ಮುಂದುವರಿದಿದ್ದು,ಮೇಜರ್ ಸಮೀರ್ ಅಲಿ ಸೇನೆಯಲ್ಲಿ ಮುಂದುವರಿದಿರಬಹುದು ಅಥವಾ ನಿವೃತ್ತಿಯಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದೊಂದಿಗೆ ಅಪನಂಬಿಕೆ ಮುಂದುವರಿದಿದ್ದು, ಜಮಾತ್ ಉದ್ ದಾವ್ ಮುಖಂಡ್ ಹಫೀಜ್ ಸಯ್ಯಿದ್ ಮತ್ತು ಅಲ್‌ಕೈದಾ ಕಮಾಂಡರ್ ಇಲಿಯಾಸ್ ಕಶ್ಮಿರಿಯನ್ನು ಭಾರತಕ್ಕೆ ಒಪ್ಪಿಸುವಂತೆ ಒತ್ತಡ ಹೇರಲಾಗಿದೆ.
ವರದಿಗಳ ಪ್ರಕಾರ ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಪೊಲೀಸ್ ವಶದಲ್ಲಿರುವ ಐವರು ಆರೋಪಿಗಳು ಹಾಗೂ ಶಂಕಿತ ಆರೋಪಿಗಳಾದ ಮುಝಾಮಿಲ್, ಅಬು ಹಮ್ಜಾ ಮತ್ತು ಉಸ್ಮಾನ್ ಹಾಗೂ ಅಬು ಕಫಾ ಅವರ ಜೊತೆಗೆ ಒಟ್ಟು 33 ಉಗ್ರರನ್ನು ವಶಕ್ಕೆ ಭಾರತದ ವಶಕ್ಕೆ ನೀಡುವಂತೆ ಕೋರಲಾಗಿದೆ.