ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೊನೆಗೂ ಕತಾರ್ ಪೌರತ್ವ ಸ್ವೀಕರಿಸಿದ ಎಂ.ಎಫ್. ಹುಸೇನ್ (India | MF Husain | Qatar citizenship | Maqboool Fida Husain)
Bookmark and Share Feedback Print
 
ವಿವಾದಿತ ಚಿತ್ರ ಕಲಾವಿದ ಎಂ.ಎಫ್. ಹುಸೇನ್ ಇನ್ನು ಬಹಳ ದಿನ ಭಾರತೀಯನಾಗಿ ಮುಂದುವರಿಯಲಾರರು. ಹುಸೇನ್ ಕತಾರ್ ಪೌರತ್ವವನ್ನು ಸ್ವೀಕರಿಸಿರುವುದನ್ನು ಸ್ವತಃ ಅವರ ಪುತ್ರ ಶುಕ್ರವಾರ ಖಚಿತಪಡಿಸಿದ್ದು, ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ಭಾರತ ಮಾತೆ ಮತ್ತು ಹಿಂದೂ ದೇವತೆಗಳ ನಗ್ನ ಹಾಗೂ ವಿಕೃತ ಚಿತ್ರಗಳನ್ನು ಬಿಡಿಸಿದ್ದಾರೆ ಎಂಬ ಆರೋಪ ಹೊತ್ತಿರುವ ಹುಸೇನ್ ಮೇಲೆ ದೇಶದಾದ್ಯಂತ 900ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಹುಸೇನ್ ಸ್ವತಃ ದೇಶ ಬಿಟ್ಟು ಹೋಗಿದ್ದರು. ಹಲವು ಹಿಂದೂ ಸಂಘಟನೆಗಳು ಅವರ ಕಲಾಕೃತಿಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಸಿದ್ದವು.

ಕಳೆದ ನಾಲ್ಕು ವರ್ಷಗಳಿಂದ ಭಾರತದಿಂದ ಹೊರಗಿರುವ ಹುಸೇನ್ ಕತಾರ್ ನೀಡಿರುವ ಪೌರತ್ವ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ಅವರ ಪುತ್ರ ಒವಾಯಿಸ್ ಹುಸೇನ್ ಸುದ್ದಿ ಸಂಸ್ಧೆಯೊಂದಕ್ಕೆ ತಿಳಿಸಿದ್ದಾರೆ.

ಹುಸೇನ್ ತನಗೆ ಕತಾರ್ ಪೌರತ್ವ ನೀಡಿರುವುದನ್ನು ಕೆಲವು ದಿನಗಳ ಹಿಂದೆ 'ದಿ ಹಿಂದೂ' ಪತ್ರಿಕೆಗೆ ತಿಳಿಸಿದ್ದರು. ಆದರೆ ಅದನ್ನು ತಾನಿನ್ನೂ ಸ್ವೀಕರಿಸಿಲ್ಲ, ಅದರ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದಿದ್ದರು ಹುಸೇನ್.

ಕತಾರ್ ರಾಷ್ಟ್ರೀಯತೆ ಬೇಕೆಂದು ನನ್ನ ತಂದೆಯವರು ಬೇಡಿಕೆ ಸಲ್ಲಿಸಿರಲಿಲ್ಲ. ಆದರೆ ಅವರು ನೀಡಿರುವ ಆಹ್ವಾನವನ್ನು ತಂದೆ ಸ್ವೀಕರಿಸಿದ್ದಾರೆ. ಅವರ ವೈಯಕ್ತಿಕ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಯಾಕೆಂದರೆ ಅವರು ಪಡುತ್ತಿರುವ ಬವಣೆಯನ್ನು, ಅವರ ಭಾವನೆಗಳನ್ನು ನಾನು ಅರ್ಥೈಸಿಕೊಳ್ಳುತ್ತೇನೆ ಎಂದು ಹುಸೇನ್ ಪುತ್ರ ಒವಾಯಿಸ್ ತಿಳಿಸಿದ್ದಾರೆ.

ಭಾರತದ ಕಾನೂನು ದ್ವಿಪೌರತ್ವಕ್ಕೆ ಅವಕಾಶ ನೀಡುವುದಿಲ್ಲ. ತಂದೆಯವರು ಕತಾರ್ ಪೌರತ್ವವನ್ನು ಸ್ವೀಕರಿಸಿದ್ದಾರೆಂದರೆ ತನ್ನಿಂತಾನೇ ಭಾರತದ ರಾಷ್ಟ್ರೀಯತೆಯನ್ನು ಅವರು ತ್ಯಜಿಸಿದಂತೆ. ಅವರಿಗೆ ಬೇರೆ ಆಯ್ಕೆಗಳೇ ಇಲ್ಲ ಎಂದು ಒವಾಯಿಸ್ ವಿವರಣೆ ನೀಡಿದ್ದಾರೆ.

ಪ್ರಸಕ್ತ ಈ 95ರ ಹರೆಯ ಕಲಾವಿದ ದೋಹಾದಲ್ಲಿದ್ದು, ಮುಂದಿನ ತಿಂಗಳು ದುಬೈಗೆ ಮರಳಲಿದ್ದಾರೆ. 'ಅವರಿಗೆ ಸಾಕಷ್ಟು ದೂರವಾಣಿ ಕರೆಗಳು ಬರುತ್ತಿದ್ದವು. ಕೆಲವಂತೂ ತೀರಾ ಪ್ರಚೋದನಕಾರಿಯಾಗಿರುತ್ತಿದ್ದವು. ಇದರಿಂದಾಗಿ ತಂದೆಯವರು ಧೃತಿಗೆಟ್ಟಿರಲಿಲ್ಲ. ಆದರೆ ಅವರನ್ನು ಮತ್ತೆ ಮೌನಕ್ಕೆ ತಳ್ಳಿತು' ಎಂದು ಅಭಿಪ್ರಾಯಪಟ್ಟರು.

ಅಷ್ಟಕ್ಕೂ ಹುಸೇನ್ ಸ್ವಾತಂತ್ರ್ಯೋತ್ತರ ಭಾರತಕ್ಕಿಂತಲೂ ಹಿರಿಯರು. ಅಲ್ಲದೆ ಅವರು ಹುಟ್ಟಿದ್ದು ಮಹಾರಾಷ್ಟ್ರದಲ್ಲೇ ಅತಿ ಪವಿತ್ರ ಸ್ಥಳಗಳಲ್ಲೊಂದಾದ ಪಂಡರಾಪುರದಲ್ಲಿ. ತಂದೆ ದೇಶವನ್ನು ತೊರೆಯಬಹುದು. ನೀವು ಅವರನ್ನು ದೇಶದಿಂದ ಹೊರಗೆ ಒಯ್ಯಬಹುದು. ಆದರೆ ಅವರ ಭಾರತೀಯತೆಯನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭಾವನಾತ್ಮಕವಾಗಿ ಹುಸೇನ್ ಎಷ್ಟು ಭಾರತೀಯರು ಎಂಬುದನ್ನು ಅವರ ಮಗ ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ