ಚಿಲಿಯಲ್ಲಿ ಪ್ರಬಲ ಭೂಕಂಪಕ್ಕೆ 76 ಬಲಿ: ತ್ಸುನಾಮಿ ಎಚ್ಚರಿಕೆ
ಸ್ಯಾಂಟಿಯಾಗೋ, ಶನಿವಾರ, 27 ಫೆಬ್ರವರಿ 2010( 17:35 IST )
ದಕ್ಷಿಣ ಚಿಲಿಯಲ್ಲಿ ಶನಿವಾರ ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು 76 ಮಂದಿ ಬಲಿಯಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ 8.8ತೀವ್ರತೆ ದಾಖಲಾಗಿರುವುದಾಗಿ ಅಮೆರಿಕದ ಭೂಗರ್ಭಶಾಸ್ತ್ರ ಇಲಾಖೆ ವರದಿ ತಿಳಿಸಿದೆ.
ಚಿಲಿಯ ರಾಜಧಾನಿ ಸ್ಯಾಂಟಿಯಾಗೊದಿಂದ ಸುಮಾರು 317ಕಿಲೋ ಮೀಟರ್ ದೂರದ ನೈರುತ್ಯ ಪ್ರಾಂತ್ಯದಲ್ಲಿ ಇಂದು ನಸುಕಿನ ವೇಳೆ ಭಾರೀ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ 17ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ರೇಡಿಯೊ ವರದಿಯೊಂದು ತಿಳಿಸಿತ್ತು. ಆದರೆ ಭೀಕರ ಭೂಕಂಪದಲ್ಲಿ 76 ಮಂದಿ ಬಲಿಯಾಗಿರುವುದಾಗಿ ಅಧ್ಯಕ್ಷ ಮೈಕೆಲ್ಲೆ ಬಾಚ್ಲೆಟ್ ಖಚಿತಪಡಿಸಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿ ಹೇಳಿದ್ದಾರೆ.
ಹಲವಡೆ ಕಟ್ಟಡಗಳೆಲ್ಲಾ ಧ್ವಂಸಗೊಂಡಿದೆ. ವಿದ್ಯುತ್, ರಸ್ತೆ ಸಂಪರ್ಕಗಳೆಲ್ಲ ಕಡಿತಗೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಿಲಿಯಲ್ಲಿ ಭಾರೀ ಭೂಕಂಪ ಸಂಭವಿಸಿದ ನಂತರ ಚಿಲಿ, ಪೆರು ಮತ್ತು ಈಕ್ವೆಡಾರ್ ಪ್ರದೇಶದ ಕರಾವಳಿ ಭಾಗದಲ್ಲಿ ತ್ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಪೆಸಿಫಿಕ್ ತ್ಸುನಾಮಿ ಎಚ್ಚರಿಕಾ ಸಂಟರ್‌ನ ಅಧಿಕಾರಿಗಳು ತಿಳಿಸಿದ್ದಾರೆ.
'ನನ್ನ ಜೀವಮಾನದಲ್ಲಿ ಭೂಕಂಪನದ ಇಂತಹ ಅನುಭವನ್ನು ಕಂಡಿಲ್ಲ, ಇದು ಪ್ರಪಂಚವೇ ಅಂತ್ಯ ಎಂಬಂತಹ ಭಯ ಹುಟ್ಟಿಸಿರುವುದಾಗಿ' ಪ್ರತ್ಯಕ್ಷದರ್ಶಿಯೊಬ್ಬರು ಸ್ಥಳೀಯ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.