ನೇಪಾಳ: ಅಕ್ರಮವಾಗಿ ಭಾರತಕ್ಕೆ ಬರುತ್ತಿದ್ದ ಟಿಬೆಟಿಗರ ಸೆರೆ
ಕಾಠ್ಮಂಡು, ಶನಿವಾರ, 27 ಫೆಬ್ರವರಿ 2010( 16:18 IST )
ಭಾರತಕ್ಕೆ ಹೋಗಲೆಂದು ನೇಪಾಳಕ್ಕೆ ಅಕ್ರಮವಾಗಿ ಬಂದಿದ್ದ 10 ಮಹಿಳೆಯರ ಸಹಿತ 17 ಟಿಬೆಟಿಗರನ್ನು ನೇಪಾಳ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತರಲ್ಲಿ ಪ್ರಯಾಣಕ್ಕೆ ಸಂಬಂಧಪಟ್ಟ ಯಾವುದೇ ದಾಖಲೆಗಳು ಇರಲಿಲ್ಲ. ಅವರನ್ನು ದೋಲಾಖ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಅವರು ಅಕ್ರಮವಾಗಿ ಪ್ರವೇಶಿಸಿದ್ದರು ಎಂದು ನೇಪಾಳ ಪೊಲೀಸ್ ವಕ್ತಾರ ಬಿಗ್ಯಾನ್ ರಾಜ್ ಶರ್ಮಾ ತಿಳಿಸಿದ್ದಾರೆ.
ಇವರನ್ನು ಹೆಚ್ಚುವರಿ ವಿಚಾರಣೆಗಾಗಿ ವಲಸೆ ಇಲಾಖೆಯ ವಶಕ್ಕೆ ಒಪ್ಪಿಸಲಾಗುತ್ತದೆ. ಬಂಧಿತ ಟಿಬೆಟಿಯನ್ನರು ಭಾರತದ ಧರ್ಮಶಾಲಾದಲ್ಲಿರುವ ತಮ್ಮ ಧರ್ಮಗುರು ದಲೈ ಲಾಮಾ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಪೊಲೀಸರು 50ಕ್ಕೂ ಹೆಚ್ಚು ಟಿಬೆಟ್ ರಾಷ್ಟ್ರೀಯರನ್ನು ನೇಪಾಳಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ.
ಪ್ರತೀ ವರ್ಷ 2,500ಕ್ಕೂ ಹೆಚ್ಚು ಟಿಬೆಟಿಯನ್ನರು ಟಿಬೆಟಿನಿಂದ ಗಡಿ ದಾಟಿ ನೇಪಾಳಕ್ಕೆ ಬಂದು, ಕಾಡು ಹಾದಿಯ ಮೂಲಕ ನಾಲ್ಕೈದು ದಿನಗಳ ಕಾಲ ನಡೆದು ಧರ್ಮಶಾಲಾಕ್ಕೆ ತೆರಳುತ್ತಾರೆ ಎಂದು ಅವರು ವಿವರಣೆ ನೀಡಿದ್ದಾರೆ.
ರಾಷ್ಟ್ರವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದಲೈ ಲಾಮಾ ಅವರನ್ನು ಚೀನಾ ಗಡೀಪಾರು ಮಾಡಿದ್ದು, ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಟಿಬೆಟ್‌ಗೆ ಸ್ವಾಯತ್ತತೆ ಕೊಡಬೇಕೆಂದು ಟಿಬೆಟ್ ಧರ್ಮಾನುಯಾಯಿಗಳು ಚೀನಾವನ್ನು ಆಗ್ರಹಿಸುತ್ತಿದ್ದು, ಇದನ್ನು ಚೀನಾ ನಿರಂತರವಾಗಿ ನಿರಾಕರಿಸುತ್ತಲೇ ಬಂದಿದೆ.