ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಿಂಗ್ ಡಿನ್ನರ್ ಕ್ರಾಶ್: ಶ್ವೇತಭವನ ಕಾರ್ಯದರ್ಶಿ ರಾಜೀನಾಮೆ (White House | Desiree Rogers | Barack Obama | Manmohan Singh)
Bookmark and Share Feedback Print
 
ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಏರ್ಪಡಿಸಲಾಗಿದ್ದ ಔತಣಕೂಟಕ್ಕೆ ರಿಯಾಲಿಟಿ ಸ್ಟಾರ್ ದಂಪತಿ ಅಕ್ರಮವಾಗಿ ಪ್ರವೇಶಿಸಿದ್ದ ವಿವಾದಕ್ಕೆ ಸಂಬಂಧಪಟ್ಟಂತೆ ಘಟನೆ ನಡೆದ ಮೂರು ತಿಂಗಳ ನಂತರ ಶ್ವೇತಭವನ ಸಾಮಾಜಿಕ ಕಾರ್ಯದರ್ಶಿ ಡಿಸಿರೀ ರೋಜರ್ಸ್ ರಾಜೀನಾಮೆ ಸಲ್ಲಿಸಿದ್ದಾರೆ.

ರೋಜರ್ಸ್ ಅವರು ಶ್ವೇತಭವನದ ಸಾಮಾಜಿಕ ಕಾರ್ಯದರ್ಶಿಯಾಗಿ ಅದ್ಭುತವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ನಮ್ಮ ಸುದೀರ್ಘ ಕಾಲದ ಗೆಳತಿ ರೋಜರ್ಸ್ ಅವರಿಗೆ ನಾವು ಆಭಾರಿಗಳಾಗಿದ್ದೇವೆ ಎಂದು ಶುಕ್ರವಾರ ಒಬಾಮಾ ಮತ್ತು ಮೊದಲ ಮಹಿಳೆ ಮಿಚ್ಚೆಲ್ ಒಬಾಮಾ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೆ ಆಹ್ವಾನವಿಲ್ಲದೆ ವರ್ಜೀನಿಯಾದ ಟೀವಿ ತಾರೆಗಳಾದ ತಾರಿಕ್ ಮತ್ತು ಮೈಕೆಲ್ ಸಲಾಹಿ ದಂಪತಿ ಶ್ವೇತಭವನದ ಕಾರ್ಯಕ್ರಮದಲ್ಲಿ (ನವೆಂಬರ್ 24ರಂದು ರಾತ್ರಿ) ಭಾಗವಹಿಸಲು ಹೇಗೆ ಸಾಧ್ಯವಾಯಿತು, ಇಲ್ಲಿ ಯಾವ ರೀತಿಯ ಭದ್ರತಾ ಲೋಪಗಳಿದ್ದವು ಮತ್ತು ಅದರಲ್ಲಿ ರೋಜರ್ಸ್ ಅವರ ಪಾತ್ರವೆಷ್ಟು ಎನ್ನುವುದನ್ನು ಒಬಾಮಾ ತನ್ನ ಹೇಳಿಕೆಯಲ್ಲಿ ತಿಳಿಸಿಲ್ಲ.

ಸಲಾಹಿ ದಂಪತಿ ಒಳಗೆ ಪ್ರವೇಶಿಸುವ ಹೊತ್ತಿನಲ್ಲಿ ಗೇಟುಗಳು ಮತ್ತು ತಪಾಸಣಾ ಕೇಂದ್ರಗಳಲ್ಲಿ ತನ್ನ ಸಿಬ್ಬಂದಿಗಳು ಇರಲಿಲ್ಲ ಎಂಬುದನ್ನು ರೋಜರ್ಸ್ ಒಪ್ಪಿಕೊಂಡಿದ್ದರು. ಭಾರತದ ಪ್ರಧಾನ ಮಂತ್ರಿಯವರಿಗೆ ಏರ್ಪಡಿಸಲಾಗಿದ್ದ ಮೊತ್ತ ಮೊದಲ ಒಬಾಮಾ ಪಾರ್ಟಿಯಲ್ಲಿ ಸುಮಾರು ಎರಡು ಗಂಟೆಗಳಷ್ಟು ಕಾಲ ಕಳೆದಿದ್ದ ದಂಪತಿ, ಅಧ್ಯಕ್ಷರು ಹಾಗೂ ಪ್ರಧಾನ ಮಂತ್ರಿಯವರಿಗೆ ಹಸ್ತಲಾಘವ ನೀಡಿದ್ದಲ್ಲದೆ, ಭಾವಚಿತ್ರಗಳನ್ನೂ ತೆಗೆಸಿಕೊಂಡಿದ್ದರು.

ಅಧ್ಯಕ್ಷರು, ಅವರ ಕುಟುಂಬ ಮತ್ತು ಶ್ವೇತಭವನಕ್ಕೆ ಭೇಟಿ ನೀಡುವ ಗಣ್ಯರನ್ನು ರಕ್ಷಿಸುವ ಕರ್ತವ್ಯ ನಿರ್ವಹಿಸಬೇಕಾಗಿದ್ದ ಅಮೆರಿಕಾ ರಹಸ್ಯ ಸೇವಾದಳವು ಈ ಘಟನೆಯ ಹೊಣೆಯನ್ನು ಹೊತ್ತುಕೊಂಡಿದ್ದರೂ, ಪ್ರವೇಶ ದ್ವಾರದಲ್ಲಿ ರಹಸ್ಯ ಸೇವಾದಳದ ಜತೆ ತನ್ನ ಸಿಬ್ಬಂದಿಗಳನ್ನು ನೇಮಿಸದೇ ಇದ್ದುದಕ್ಕೆ ರೋಜರ್ಸ್‌ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿತ್ತು.

ರೋಜರ್ಸ್ ಅವರು ಕಾರ್ಪೊರೇಟ್ ಜಗತ್ತಿಗೆ ಮರಳಲಿದ್ದು, ಅವರ ಸ್ಥಾನಕ್ಕೆ ಬೇರೆ ಯಾರು ಬರಲಿದ್ದಾರೆ ಎಂಬುದನ್ನು ಶ್ವೇತಭವನ ಇನ್ನೂ ಪ್ರಕಟಿಸಿಲ್ಲ. ಅವರ ರಾಜೀನಾಮೆಗೂ ಒಬಾಮಾ ದಂಪತಿ ಒತ್ತಾಯಿಸಿರಲಿಲ್ಲ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ