ಸ್ಯಾಂಟಿಯಾಗೋ, ಭಾನುವಾರ, 28 ಫೆಬ್ರವರಿ 2010( 12:57 IST )
ಚಿಲಿಯಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತರಾದವರ ಸಂಖ್ಯೆ 300ಕ್ಕೇರಿದೆ.
ರಾಷ್ಟ್ರಾಧ್ಯಕ್ಷ ಮೈಕೆಲ್ ಬ್ಯಾಚ್ಲೆಟ್ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡಿದ್ದು, ಚಿಲಿ ಕಂಡ ಅತ್ಯಂತ ದೊಡ್ಡ ದುರಂತ ಇದಾಗಿದೆ. ಸಾವಿನ ಸಂಖ್ಯೆ ಈಗಿನ ಪ್ರಕಾರ 300ಕ್ಕೇರಿದೆ. ಹಾಗೂ 2 ಮಿಲಿಯನ್‌ಗೂ ಅಧಿಕ ಮಂದಿಗೆ ಭೂಕಂಪದ ಪರಿಣಾಮ ತಟ್ಟಿದೆ ಎಂದು ಹೇಳಿದ್ದಾರೆ.
ಭೂಕಂಪದ ಪರಿಣಾಮ ದಕ್ಷಿಣ ಅಮೆರಿಕದ ರಸ್ತೆಗಳು ಎರಡು ಹೋಳಾಗಿದ್ದು, ಭಾರೀ ಕಂದಕಗಳು ಏರ್ಪಟ್ಟಿವೆ. ಮೇಲ್ಸೇತುವೆಗಳು, ಭಾರೀ ಕಟ್ಟಡಗಳೆಲ್ಲವೂ ನೆಲಸಮವಾಗಿವೆ. ಹಾಗಾಗಿ ಆದ ನಷ್ಟವನ್ನು ಅಂದಾಜು ಮಾಡುವುದು ಕಷ್ಟ. ಆದರೆ ಮೃತರ ಸಂಖ್ಯೆ ಮಾತ್ರ 300ಕ್ಕೇರಿದ್ದು, ಇನ್ನೂ ಅವಶೇಷಗಳೆಡೆಯಿಂದ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ಮೃತರ ಸಂಖ್ಯೆ ಇನ್ನೂ ಏರುವ ಸಂಭವ ಇದೆ ಎಂದು ಅವರು ಹೇಳಿದರು.