ಆಡಳಿತ ನಡೆಸಲು ಬಾರದಿದ್ರೆ ರಾಜೀನಾಮೆ ನೀಡಿ: ಹಸೀನಾಗೆ ಜಿಯಾ
ಢಾಕಾ, ಸೋಮವಾರ, 1 ಮಾರ್ಚ್ 2010( 14:53 IST )
ಬಾಂಗ್ಲಾದೇಶ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ವಿರೋಧ ಪಕ್ಷದ ನಾಯಕಿ ಖಾಲಿದಾ ಜಿಯಾ ಕರೆ ನೀಡಿದ್ದು, ಸಮರ್ಪಕವಾಗಿ ಆಡಳಿತ ನಡೆಸಲು ಆಗದಿದ್ದರೆ ಪ್ರಧಾನಿ ಶೇಕ್ ಹಸೀನಾ ಪದತ್ಯಾಗ ಮಾಡುವಂತೆ ಕಿಡಿಕಾರಿದ್ದಾರೆ.
ಆಡಳಿತಾರೂಢ ಸರ್ಕಾರದಿಂದ ಯಾವ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಜಿಯಾ ಆರೋಪಿಸಿದರು. ಈ ಸರ್ಕಾರ ದೇಶವನ್ನು ಮತ್ತೂ 20ವರ್ಷಗಳ ಹಿಂದಕ್ಕೆ ಒಯ್ಯುತ್ತಿದೆ ಎಂದು ದೂರಿದ್ದಾರೆ. ದೇಶದ ಹಿತಾಸಕ್ತಿಯ ನಿಟ್ಟಿನಲ್ಲಿ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿರುವುದಾಗಿ ಡೈಲಿ ಸ್ಟಾರ್ ವರದಿ ತಿಳಿಸಿದೆ.
ಭಾರತಕ್ಕೆ ಇತ್ತೀಚೆಗೆ ಹಸೀನಾ ಭೇಟಿ ನೀಡಿದ ಸಂದರ್ಭದಲ್ಲಿ ರಕ್ಷಣೆ ಸೇರಿದಂತೆ ಹಲವಾರು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಹಸೀನಾ ಭಾರತದೊಂದಿಗೆ ರಹಸ್ಯ ರಕ್ಷಣಾ ಒಪ್ಪಂದ ಮಾಡಿಕೊಂಡಿರುವುದಾಗಿ ಗಂಭೀರವಾಗಿ ಆರೋಪಿಸಿದರು.
ಇತ್ತೀಚೆಗಷ್ಟೇ ಖಾಲಿದಾ ಅವರ ಬಾಂಗ್ಲಾದೇಶ ನ್ಯಾಷನಲ್ ಪಕ್ಷ(ಬಿಎನ್‌ಪಿ)ದ ಕಚೇರಿ ಸಮೀಪ ಸ್ಫೋಟ ಸಂಭವಿಸಿದ ನಂತರ ಆಡಳಿತಾರೂಢ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದಾರೆ. ಖಾಲಿದಾ ಅವರನ್ನು ಗುರಿಯಾಗಿಟ್ಟುಕೊಂಡೇ ಈ ಸ್ಫೋಟ ಸಂಚು ನಡೆಸಲಾಗಿದೆ ಎಂದು ಬಿಎನ್‌ಪಿ ದೂರಿತ್ತು.