ಇಸ್ರೇಲ್‌ನ ಬೇಹುಗಾರಿಕಾ ಪಡೆ 'ಮೊಸಾದ್'ನಿಂದ ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿರುವ ಹಮಾಸ್ ನಾಯಕನಿಗೆ ಡ್ರಗ್ಸ್ ನೀಡಿದ ನಂತರ ಉಸಿರುಗಟ್ಟಿಸಿ ಕೊಲ್ಲಲಾಗಿತ್ತು ಎಂದು ದುಬೈ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಹತ್ಯಾಕೋರರಿಗೆ ಕೆಲವು ಸಲಕರಣೆಗಳನ್ನು ಪೂರೈಸಿದ ಆರೋಪದ ಮೇಲೆ ಪಾಲಿಸ್ತೇನ್ ಪ್ರಜೆಯೊಬ್ಬನನ್ನು ಕೂಡ ನಾವು ಬಂಧಿಸಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಪೊಲೀಸರು ವಿವರಣೆ ನೀಡಿದ್ದಾರೆ.
ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ ದುಬೈ ಪೊಲೀಸ್ ಇಲಾಖೆಯ ಉಪ ಮುಖ್ಯಸ್ಥ ಮೇಜರ್ ಜನರಲ್ ಖಾಮಿಸ್ ಮಾತರ್ ಅಲ್ ಮೆಜೈನಾ, ಸಕಿನಿಲ್ಕೊಲೈನ್ ಎಂಬ ಔಷಧಿಯನ್ನು ಹಮಾಸ್ ನಾಯಕ ಮಹ್ಮೂದ್ ಅಲ್ ಮಬೂ ಅವರಿಗೆ ನೀಡಿದ ಬಳಿಕ ಅವರನ್ನು ಉಸಿರುಗಟ್ಟಿಸಿ ಕೊಲ್ಲಲಾಗಿತ್ತು ಎಂದಿದ್ದಾರೆ.
ಕೊಲೆಗಾರರು ಈ ವಿಧಾನವನ್ನು ಅನುಸರಿಸಿದ ಕಾರಣ ಅವರ ಸಾವು ಸಹಜ ಎಂಬಂತೆ ಕಂಡು ಬಂದಿತ್ತು. ಬಲಿಪಶು ಈ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆಯನ್ನು ವ್ಯಕ್ತಪಡಿಸಿರಲಿಲ್ಲ ಎಂದು ಖಾಮಿಸ್ ವಿವರಣೆ ನೀಡಿದ್ದಾರೆ.
ಹಂತಕರು ಬಲಿಪಶುವಿಗೆ ಡ್ರಗ್ಸ್ ಕೊಟ್ಟಿರುವುದು ಶವದ ಮರಣೋತ್ತರ ಪರೀಕ್ಷಾ ವರದಿಯು ಬಹಿರಂಗಗೊಳಿಸಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಡ್ರಗ್ಸ್ ನೀಡಲಾಗಿತ್ತು ಎಂಬುದನ್ನು ಪರೀಕ್ಷೆಯಲ್ಲಿ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಜನವರಿ 20ರಂದು ದುಬೈನ ಐಷಾರಾಮಿ ಹೊಟೇಲೊಂದರಲ್ಲಿ ಯೋಜನಾಬದ್ಧವಾಗಿ ಹಮಾಸ್ ನಾಯಕ ಮಹ್ಮೂದ್ ಅಲ್ ಮಬೂ ಅವರನ್ನು ಇಸ್ರೇಲ್‌ನ ಬೇಹುಗಾರಿಕಾ ಸಂಸ್ಥೆ 'ಮೊಸಾದ್' ಹತ್ಯೆಗೈದಿದೆ ಎಂದು ದುಬೈ ಪೊಲೀಸರು ಆರೋಪಿಸಿದ್ದಾರೆ.
ಈ ಸಂಬಂಧ ಹಲವರನ್ನು ಗುರುತಿಸಿರುವ ದುಬೈ, ಹಲವು ದೇಶಗಳಿಗೆ ಸೇರಿದ ಪಾಸ್‌ಪೋರ್ಟ್ ಹೊಂದಿರುವ ಆರೋಪಿಗಳ ಭಾವಚಿತ್ರಗಳನ್ನು ಸಿಸಿಟಿವಿ ಸಹಾಯದಿಂದ ಬಿಡುಗಡೆ ಮಾಡಿತ್ತು. ಆದರೆ ಈ ಸಂಬಂಧ ಇದುವರೆಗೂ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.