ಮುಂಬೈ ದಾಳಿಗೆ ಸಹಕಾರ ಮತ್ತು ಪಿತೂರಿ ನಡೆಸಿದ ಆರೋಪ ಹೊತ್ತಿರುವ ಲಷ್ಕರ್ ಇ ತೋಯ್ಬಾ ಕಮಾಂಡರ್ ಝಾಕೀರ್ ರೆಹ್ಮಾನ್ ಲಖ್ವಿ ಸಹಿತ ಏಳು ಮಂದಿಯ ವಿರುದ್ಧದ ಮುಂದಿನ ವಿಚಾರಣೆಯನ್ನು ಮಾರ್ಚ್ 6ರಂದು ನಡೆಸಲಾಗುತ್ತದೆ ಪಾಕಿಸ್ತಾನದ ವಿಚಾರಣಾ ನ್ಯಾಯಾಲಯವು ನಿಗದಿಪಡಿಸಿದೆ.
ಫೆಬ್ರವರಿ 27ರಂದು ನಡೆಯಬೇಕಿದ್ದ ಕಳೆದ ಬಾರಿಯ ವಿಚಾರಣೆ ಪ್ರವಾದಿ ಮೊಹಮ್ಮದ್ ಅವರ ಹುಟ್ಟುಹಬ್ಬದ ರಜಾದಿನದ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಇಂದು ನಡೆದ ವಿಚಾರಣೆ ಕೇವಲ ಔಪಚಾರಿಕತೆಯಷ್ಟೇ ಆಗಿತ್ತು.
ಮುಂದಿನ ವಿಚಾರಣೆಯನ್ನು ಮಾರ್ಚ್ 6ಕ್ಕೆ ನ್ಯಾಯಾಧೀಶರು ನಿಗದಿಪಡಿಸಿದ್ದಾರೆ ಎಂದು ಕೆಲವು ಆರೋಪಿಗಳ ಪರ ವಕಾಲತ್ತು ನಡೆಸುತ್ತಿರುವ ವಕೀಲ ಶಾಹ್ಬಾಜ್ ರಾಜ್ಪುತ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ರಾವಲ್ಪಿಂಡಿಯಲ್ಲಿನ ಭಯೋತ್ಪಾದನಾ ತಡೆ ನ್ಯಾಯಾಲಯವು ಫಿರ್ಯಾದಿದಾರರ ಸಾಕ್ಷಿಗಳನ್ನು ಮುಂದಿನ ವಿಚಾರಣೆ ಸಂದರ್ಭದಲ್ಲಿ ಹಾಜರುಪಡಿಸುವಂತೆ ಆದೇಶ ನೀಡಿದೆ.
ಭದ್ರತಾ ಕಾರಣಗಳಿಂದಾಗಿ ಇಲ್ಲಿನ ಆಡಿಯಾಲ ಜೈಲಿನಲ್ಲಿ ನಡೆಸಲಾಗುತ್ತಿದ್ದು, ನ್ಯಾಯಮೂರ್ತಿ ಮಲಿಕ್ ಮೊಹಮ್ಮದ್ ಅಕ್ರಮ್ ಅವಾನ್ ವಿಚಾರಣೆ ನಡೆಸುತ್ತಾರೆ.
ಲಖ್ವಿ, ಝರಾರ್ ಶಾಹ್, ಅಬೂ ಅಲ್ ಖಾಮಾ, ಹಮಾದ್ ಅಮೀನ್ ಸಾಧಿಕ್, ಶಾಹಿದ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಮತ್ತು ಯೂನಸ್ ಅಂಜುಮ್ ಎಂಬ ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿಚಾರಣೆಗಳು ನಡೆಯುತ್ತಿವೆ.
ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ 2008ರ ನವೆಂಬರ್ 26ರಂದು ದಾಳಿ ನಡೆಸಿ 166 ಮಂದಿ ಅಮಾಯಕರ ಸಾವಿಗೆ ಕಾರಣವಾದ ಘಟನೆಯ ಆರೋಪವನ್ನು ಈ ಏಳು ಮಂದಿಯ ಮೇಲೆ ಹೊರಿಸಲಾಗಿದೆ. ಇವರು ಭಯೋತ್ಪಾದಕರಿಗೆ ಸಹಕಾರ ಮತ್ತು ಯೋಜನೆ ರೂಪಿಸಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.