ಭಾರತದ ಜತೆ ಸಮಗ್ರ ಮಾತುಕತೆ ಪುನರಾರಂಭಕ್ಕೆ ತಾನು ಸಿದ್ಧ ಎಂದು ಹೇಳಿರುವ ಪಾಕಿಸ್ತಾನ, ಇದಕ್ಕಾಗಿ ನವದೆಹಲಿ ವಿಧಿಸುವ ಪೂರ್ವ ಷರತ್ತುಗಳನ್ನು ಇಸ್ಲಾಮಾಬಾದ್ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಖಾಸಗಿ ವಾರ್ತಾವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿತ್, ಪೂರ್ವ ಷರತ್ತು ವಿಧಿಸುವುದಾದಲ್ಲಿ ಇಸ್ಲಾಮಾಬಾದ್ ಕೂಡ ಅಂತಹ ಕೆಲವು ಷರತ್ತುಗಳನ್ನು ವಿಧಿಸಬಹುದಾಗಿದೆ. ಆದರೆ ಭಾರತದ ಜತೆಗಿನ ದ್ವಿಪಕ್ಷೀಯ ವಿಚಾರಗಳು ಧನಾತ್ಮಕ ಮಾತುಕತೆಯ ಮೂಲಕ ಪರಿಹರಿಸಬೇಕೆಂದು ಪಾಕಿಸ್ತಾನ ನಂಬಿದೆ ಎಂದರು.
ಚೆಂಡು ಭಾರತದ ಅಂಗಳದಲ್ಲಿದೆ. ಸಮಗ್ರ ಮಾತುಕತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಬಾಸಿತ್ ಹೇಳಿದ್ದಾರೆಂದು ಡೈಲಿ ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ.
ಪಾಕಿಸ್ತಾನವು ಸಮಗ್ರ ಮಾತುಕತೆ ಪುನರಾರಂಭಕ್ಕೆ ಆಸಕ್ತಿ ಹೊಂದಿದೆ ಎಂಬ ವಿಚಾರವನ್ನು ಭಾರತಕ್ಕೆ ತಲುಪಿಸಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಎರಡು ದೇಶಗಳ ನಡುವಿನ ಮಾತುಕತೆ ಪುನರಾರಂಭ ಕೇವಲ ಭಾರತ ಮತ್ತು ಪಾಕಿಸ್ತಾನಗಳ ಹಿತದೃಷ್ಟಿಯಿಂದ ಮಾತ್ರವಲ್ಲ, ಇಡೀ ದಕ್ಷಿಣ ಏಷಿಯಾದ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಬಾಸಿತ್ ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದನೆ ವಿಚಾರದಲ್ಲಿ ಇಸ್ಲಾಮಾಬಾದ್ ಮತ್ತು ನವದೆಹಲಿಗಳು ಪರಸ್ಪರ ಸಹಕಾರ ತತ್ವವನ್ನು ಅನುಸರಿಸಿ ಸಮಸ್ಯೆ ಬಗೆಹರಿಸಲು ಯತ್ನಿಸಬೇಕು ಎಂದು ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆದಿತ್ತು. 2008ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಮುರಿದು ಬಿದ್ದಿದ್ದ ಮಾತುಕತೆಗೆ ಚಾಲನೆ ನೀಡಿದ್ದ ಉಭಯ ದೇಶಗಳು, ಸಮಗ್ರ ಮಾತುಕತೆಯತ್ತ ಎದುರು ನೋಡುತ್ತಿವೆ.