ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಹೇಳಲಾಗಿರುವ ಬಿಲಾಲ್ ಹೊಸೈನ್ ಆಲಿಯಾಸ್ ನಾನು ಮೊಂಡಾಲ್ ಎಂಬಾತನನ್ನು ಬಾಂಗ್ಲಾದೇಶ ಸೆರೆ ಹಿಡಿದಿದ್ದು, ಭಾರತಕ್ಕೆ ಹಸ್ತಾಂತರ ನಡೆಸುವ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
1999ರ ಡಿಸೆಂಬರ್ 24ರಂದು ಕಾಠ್ಮಂಡುವಿನಿಂದ ಹೊರಟಿದ್ದ 'ಏರ್ ಇಂಡಿಯಾ ಐಸಿ-814' ವಿಮಾನವನ್ನು ಅಫಘಾನಿಸ್ತಾನದ ಕಂದಹಾರ್‌ಗೆ ಅಪಹರಿಸಿ ಪ್ರಯಾಣಿಕರನ್ನು ಒತ್ತೆಯಿಟ್ಟುಕೊಂಡು ಹಲವು ಉಗ್ರರನ್ನು ಬಿಡಿಸಿಕೊಂಡು ಹೋಗುವಲ್ಲಿ ಅಪಹರಣಕಾರರು ಯಶಸ್ವಿಯಾಗಿದ್ದರು. ಈ ಪ್ರಕರಣದಲ್ಲಿ ಬಿಲಾಲ್ ಕೂಡ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಸ್ವತಃ ಆತನೇ ಈಗ ಒಪ್ಪಿಕೊಂಡಿದ್ದಾನೆ ಎಂದು ಬಾಂಗ್ಲಾ ಪೊಲೀಸರು ತಿಳಿಸಿದ್ದಾರೆ.
ಬಿಲಾಲ್ ಹೊಸೈನ್ ಜತೆಗೆ ಜೈಶ್ ಇ ಮೊಹಮ್ಮದ್ ಭಯೋತ್ಪಾದಕರಾದ ಇತರ ನಾಲ್ವರನ್ನೂ ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನಿ ಪ್ರಜೆ ರೆಜ್ವಾನ್ ಅಹ್ಮದ್ ಕೂಡ ಬಂಧಿತರಲ್ಲೊಬ್ಬ. ಉಳಿದಂತೆ ಇಮಾಜುದ್ದೀನ್ ಆಲಿಯಾಸ್ ಮುನ್ನಾ, ಸಾಧಿಕ್ ಹೊಸೈನ್ ಆಲಿಯಾಸ್ ಖೋಕಾ ಮತ್ತು ಅಬೂ ನಸೀರ್ ಮುನ್ಶಿಯವರನ್ನು ಭಾನುವಾರ ಬಾಂಗ್ಲಾದೇಶದ ರ‌್ಯಾಪಿಡ್ ಆಕ್ಷನ್ ಬೆಟಾಲಿಯನ್ ಪಡೆಯು ಬಂಧಿಸಿತ್ತು.
ಬಾಂಗ್ಲಾದೇಶದ ಪತ್ರಿಕೆ 'ಪ್ರಥಮ್ ಆಲೋ' ತನ್ನ ವರದಿಯಲ್ಲಿ ತನಿಖಾಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿದ್ದು, ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಬಿಲಾಲ್ ಆರೋಪಿಯಾಗಿದ್ದಾನೆ ಎಂದು ತಿಳಿಸಿರುವುದನ್ನು ಪ್ರಕಟಿಸಿದೆ.
ತಾನು ವಿಮಾನ ಅಪಹರಣ ಪ್ರಕರಣದಲ್ಲಿ ಪಾತ್ರವಹಿಸಿದ್ದೇನೆ ಎಂದು ಬಿಲಾಲ್ ವಿಚಾರಣೆ ಸಂದರ್ಭದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಸಂಬಂಧಪಟ್ಟವರು ಇದೀಗ ಬಿಲಾಲ್ ಭಯೋತ್ಪಾದನಾ ದಾಳಿಗಳಲ್ಲೂ ಪಾಲ್ಗೊಂಡಿದ್ದಾನೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪತ್ರಿಕೆ ಹೇಳಿದೆ.
ಈ ನಡುವೆ ಬಂಧನ ನಂತರ ಬಿಲಾಲ್, ತಾನು ಹಲವು ಕೇಸುಗಳ ಸಂಬಂಧ ಭಾರತದ ಗುವಾಹತಿ ಜೈಲಿನಲ್ಲಿ ಸುಮಾರು 10 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಬಾಂಗ್ಲಾ ಪೊಲೀಸರ ಪ್ರಕಾರ ಬಿಲಾಲ್ ಸೇರಿದಂತೆ ಐವರು ಭಯೋತ್ಪಾದಕರು ಭಾರತದ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದರು. ಅದಕ್ಕಾಗಿ ಅವರು ಬಾಂಗ್ಲಾವನ್ನು ತಮ್ಮ ತಾಣವನ್ನಾಗಿ ಬಳಸಿಕೊಂಡಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿಯವರ ಭದ್ರತಾ ಸಲಹೆಗಾರ ಜಿಎಂ ಶ್ರೀವಾತ್ಸವ್, ಕಂದಹಾರ್ ವಿಮಾನ ಅಪಹರಣಕ್ಕೂ ಬಿಲಾಲ್‌ಗೂ ಇರುವ ಸಂಬಂಧದ ಬಗ್ಗೆ ಇನ್ನಷ್ಟೇ ಭಾರತ ಖಚಿತಪಡಿಸಬೇಕಿದೆ. ಆದರೆ ಆತನ ಹಸ್ತಾಂತರದ ಕುರಿತು ಸರಕಾರಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಸುಳಿವು ನೀಡಿದ್ದಾರೆ.