ಶ್ರೀಲಂಕಾ:ವಾನ್ನಿಯ ಎಲ್‌ಟಿಟಿಇ ಪ್ರಮುಖ ನೆಲೆ ಈಗ ಪೊಲೀಸ್ ಠಾಣೆ!
ಕೊಲಂಬೊ, ಮಂಗಳವಾರ, 2 ಮಾರ್ಚ್ 2010( 15:55 IST )
ಶ್ರೀಲಂಕಾ ಮಿಲಿಟರಿ ಪಡೆ ಎಲ್‌ಟಿಟಿಇ ಪಡೆಯನ್ನು ಪರಾಜಯಗೊಳಿಸಿದ ನಂತರ ಉತ್ತರ ಭಾಗದ ಪೂನಾರ್ಯಾನ್ ಪ್ರದೇಶದಲ್ಲಿನ ಎಲ್‌ಟಿಟಿಇಯ ಪ್ರಮುಖ ನೆಲೆಯನ್ನು ಇದೀಗ ಪೊಲೀಸ್ ಠಾಣೆಯನ್ನಾಗಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾನ್ನಿಯ ಪೂನಾರ್ಯಾನ್ ತಮಿಳು ಟೈಗರ್‌ಗಳ ಪ್ರಮುಖ ನೆಲೆಯಾಗಿತ್ತು.ಈ ಪ್ರದೇಶದಿಂದಲೇ ಬಂಡುಕೋರರು ದಕ್ಷಿಣ ಜಾಫ್ನಾ ಪ್ರದೇಶವನ್ನು ನಿಯಂತ್ರಿಸುತ್ತಿದ್ದರು. ಆದರೆ ಲಂಕಾ ಮಿಲಿಟರಿ ಪಡೆ ನಡೆಸಿದ ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಎಲ್‌ಟಿಟಿಇ ಪಡೆಯನ್ನು ಬಗ್ಗು ಬಡಿದಿತ್ತು.
ಇದೀಗ 98ಕಿ.ಮೀ.ದೂರದ ಎ32ರಾಷ್ಟ್ರೀಯ ಹೆದ್ದಾರಿಯಿಂದ ಸುತ್ತುವರಿದಿರುವ ಪೂನಾರ್ಯಾನ್‌ನಲ್ಲಿ ನೂತನ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ. ನೂತನವಾಗಿ ನಿರ್ಮಿಸಲ್ಪಟ್ಟ ಎ32ಹೈವೇಯನ್ನು ಸೋಮವಾರ ಐಜಿಪಿ ಮಹೀಂದಾ ಬಾಲಾಸೂರ್ಯ ಉದ್ಘಾಟಿಸಿದ್ದರು.
ಈ ಪ್ರದೇಶದಲ್ಲಿ ಸುಮಾರು ಹತ್ತು ಸಾವಿರ ಮಂದಿ ವಾಸ್ತವ್ಯ ಹೂಡಿದ್ದಾರೆ. ಆ ನಿಟ್ಟಿನಲ್ಲಿ ದೇಶದಲ್ಲಿನ 423ನೇ ಪೊಲೀಸ್ ಠಾಣೆ ಇದಾಗಿದ್ದು, ಎ32ಹೈವೇ 5ನೇಯದ್ದಾಗಿದೆ ಎಂದು ಐಜಿಪಿ ತಿಳಿಸಿದ್ದಾರೆ.
ಎ32ರಾಷ್ಟ್ರೀಯ ಹೆದ್ದಾರಿಯನ್ನು 1988ರಲ್ಲಿ ಸಾರ್ವಜನಿಕ ಸಂಚಾರಕ್ಕೆ ಮಿಲಿಟರಿ ವತಿಯಿಂದ ನಿಷೇಧ ಹೇರಲಾಗಿತ್ತು. ಆ ನಿಟ್ಟಿನಲ್ಲಿ 22ವರ್ಷಗಳ ನಂತರ ರಸ್ತೆ ಸಂಚಾರವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದಂತಾಗಿದೆ.